ಯುಪಿ ಚುನಾವಣೆ: 12 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಸಮಾಜವಾದಿ ಪಕ್ಷ
ಲಕ್ನೋ, ಫೆಬ್ರವರಿ 2: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಹಿನ್ನೆಲೆ ಸಮಾಜವಾದಿ ಪಕ್ಷ 12 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಬುಧವಾರ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಾರ, ವಿಜ್ಮಾ ಯಾದವ್ ಪ್ರತಾಪುರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅಮರನಾಥ್ ಮೌರ್ಯ ಅಲಹಾಬಾದ್ ಪಶ್ಚಿಮ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆ.
ಅಲಹಾಬಾದ್ ದಕ್ಷಿಣದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರೈಶ್ ಚಂದ್ರ ಶುಕ್ಲಾ ಅವರನ್ನು ಕಣಕ್ಕಿಳಿಸಲಾಗಿದೆ. ಈ ಪಟ್ಟಿಯಲ್ಲಿ ಹೈದರ್‌ಗಢ್ ರಾಮ್ಮಗನ್ ರಾವತ್ ಮತ್ತು ಕೈಸರ್‌ಗಂಜ್ ಮಸೂದ್ ಆಲಂ ಖಾನ್ ಅಂತಹ ಇತರೆ ಅಭ್ಯರ್ಥಿಗಳು ಸೇರಿದ್ದಾರೆ.
ಮಾಟೆರಾದಿಂದ ಮೊಹಮ್ಮದ್ ರಂಜಾನ್ , ಭಿಂಗಾದಿಂದ ಇಂದ್ರಾಣಿ ವರ್ಮಾ ಹಾಗೂ ಶ್ರಾವಸ್ತಿ ವಿಧಾನಸಭೆ ಕ್ಷೇತ್ರದಿಂದ ಮೊಹಮ್ಮದ್ ಅಸ್ಲಂ ರೈನಿ ಸ್ಪರ್ಧಿಸಲಿದ್ದಾರೆ. ಎಸ್‌ಪಿಯ 12 ಅಭ್ಯರ್ಥಿಗಳ ಪಟ್ಟಿಯಲ್ಲಿ 2 ಮಹಿಳೆಯರು, ಒಬ್ಬ ಬ್ರಾಹ್ಮಣ, 2 ಯಾದವ್ ಮತ್ತು 3 ಮುಸ್ಲಿಂ ಅಭ್ಯರ್ಥಿಗಳಿದ್ದಾರೆ.

ವಿಧಾನಸಭೆ ಕ್ಷೇತ್ರ ಬದಲಿಸಿದ ಎಸ್‌ಪಿ ಮೌರ್ಯ:
ಇದಕ್ಕೂ ಮುನ್ನ ಸಮಾಜವಾದಿ ಪಕ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೂ ಮೂವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಎಸ್‌ಪಿಯ ಹೊಸ ಅಭ್ಯರ್ಥಿ ಪಟ್ಟಿಯ ಪ್ರಕಾರ, ಆಡಳಿತಾರೂಢ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿರುವ ಸ್ವಾಮಿ ಪ್ರಸಾದ್ ಮೌರ್ಯ, ಮುಂಬರುವ ಚುನಾವಣೆಯಲ್ಲಿ ತಮ್ಮ ಭದ್ರಕೋಟೆ ಪದ್ರೌಣ ಬದಲಿಗೆ ಕುಶಿನಗರ ಜಿಲ್ಲೆಯ ಫಾಜಿಲ್‌ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
2009ರಲ್ಲಿ ಆರ್‌ಪಿಎನ್ ಸಿಂಗ್ ವಿರುದ್ಧ ಮೌರ್ಯ ಸೋಲು:
ಕುಶಿನಗರ ಲೋಕಸಭೆ ಕ್ಷೇತ್ರದ ಮಾಜಿ ಸಂಸದ ಆಗಿರುವ ಆರ್‌ಪಿಎನ್ ಸಿಂಗ್ 2009ರ ಕೇಂದ್ರ ಚುನಾವಣೆಯಲ್ಲಿ ಸ್ವಾಮಿ ಪ್ರಸಾದ್ ಮೌರ್ಯರನ್ನು ಸೋಲಿಸಿದ್ದರು. ಅದೇ ಆರ್‌ಪಿಎನ್ ಸಿಂಗ್ ಈಗ ಬಿಜೆಪಿ ಸೇರ್ಪಡೆಯಾಗಿದ್ದು, ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಸ್ಪರ್ಧಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಇನ್ನು, ಸ್ವಾಮಿ ಪ್ರಸಾದ್ ಮೌರ್ಯ ಮೂರು ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದು, ಎರಡು ಬಾರಿ ಪದ್ರೌಣ ವಿಧಾನಸಭೆ ಕ್ಷೇತ್ರದಿಂದಲೇ ಗೆಲುವು ಸಾಧಿಸಿದ್ದರು. ಕಳೆದ 2016ರಲ್ಲಿ ಬಹುಜನ ಸಮಾಜವಾದಿ ಪಕ್ಷವನ್ನು ತೊರೆದಿದ್ದ ಸ್ವಾಮಿ ಪ್ರಸಾದ್ ಮೌರ್ಯ, ಬಿಜೆಪಿಗೆ ಸೇರ್ಪಡೆ ಆಗಿದ್ದರು.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications