ರಾಮಮಂದಿರ ಟ್ರಸ್ಟ್ ಮುಖ್ಯಸ್ಥ ಮಹಾಂತ್ ಗೋಪಾಲ್ ದಾಸ್ ರಿಗೆ ಕೊವಿಡ್-19
ಲಕ್ನೋ, ಆಗಸ್ಟ್.13: ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥರಾದ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ನೊವೆಲ್ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.
Recommended Video
ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ವೈದ್ಯಕೀಯ ತಪಾಸಣೆಗೆ ತೆರಳಿದ ಸಂದರ್ಭದಲ್ಲಿ ಮಹಾಂತ್ ನೃತ್ಯ ಗೋಪಾಲದಾಸ್ ರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೋಂಕು ತಗಲಿರುವುದು ಪತ್ತೆಯಾಗಿದ್ದು, ವೈದ್ಯರ ತಂಡವು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ.
ಮದಾಂತ್ ಆಸ್ಪತ್ರೆಯ ವೈದ್ಯ ಡಾ.ತ್ರೆಹಾನ್ ಅವರ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದು, ಗೋಪಾಲ್ ದಾಸ್ ಅವರಿಗೆ ತಕ್ಷಣ ಸೂಕ್ತ ರೀತಿಯ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ. ಇದರ ಜೊತೆ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ರೀತಿ ಸೌಲಭ್ಯಗಳನ್ನು ಒದಗಿಸುವಂತೆ ಮಥುರಾ ಜಿಲ್ಲಾಡಳಿತಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

ರಾಮ ಮಂದಿರ ಭೂಮಿ ಪೂಜೆಯಲ್ಲಿ ಮಹತ್ವದ ಪಾತ್ರ:
ಕಳೆದ ಆಗಸ್ಟ್.05ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಸಂದರ್ಭದಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥರಾದ ಮಹಾಂತ್ ನೃತ್ಯ ಗೋಪಾಲದಾಸ್ ಮಹತ್ವದ ಪಾತ್ರ ವಹಿಸಿದ್ದರು. 100ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಪೂಜೆಗಳ ಮುಂದಾಳತ್ವ ವಹಿಸಿಕೊಂಡಿದ್ದರು.
ಅಯೋಧ್ಯೆಯಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ಸಲ್ಲುತ್ತದೆ. ರಾಮಾಯಣ ಭವನ, ಶ್ರೀರಂಗನಾಥ ದೇವಸ್ಥಾನ ಮತ್ತು ಶ್ರೀಚಾರ್ ಧಾಮ್ ದೇವಾಲಯಗಳು ಸೇರಿವೆ. ದಶಕಗಳಿಂದಲೂ ರಾಮ ಜನ್ಮಭೂಮಿ ದೇವಾಲಯದ ಚಳುವಳಿಯೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದಾರೆ.












Click it and Unblock the Notifications