ರಾಜಕೀಯ ಪ್ರಾಮುಖ್ಯಕ್ಕಾಗಿ ಗೋತ್ರ, ಜನಿವಾರ ತೋರಿಸ್ತಿದ್ದಾರೆ: ಯೋಗಿ ಟಾಂಗ್
ಲಖನೌ, ಡಿಸೆಂಬರ್ 16: ದೇಶದ ರಾಜಕಾರಣದಲ್ಲಿ ಪ್ರಾಮುಖ್ಯ ಪಡೆಯುವ ಸಲುವಾಗಿ ತಮ್ಮ ಗೋತ್ರದ ಬಗ್ಗೆ ಹೇಳಿಕೊಳ್ಳುವುದಕ್ಕೆ ಹಾಗೂ ಜನಿವಾರ ತೋರಿಸುವುದಕ್ಕೆ ಶುರು ಮಾಡಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೇವಡಿ ಮಾಡಿದ್ದಾರೆ.
ಹಿಂದೂ ಆಗಿದ್ದು ತಮ್ಮ ಆಯ್ಕೆಯಿಂದಲ್ಲ ಎನ್ನುತ್ತಿದ್ದವರೇ ಈಗ ನಿಜವಾದ ಅರ್ಥದಲ್ಲಿ ಹಿಂದೂಗಳು ಎನ್ನುತ್ತಿದ್ದಾರೆ. ಸನಾತನ ಧರ್ಮಕ್ಕೆ ಸಿಕ್ಕ ಜಯ ಇದು ಎಂದು ಹೇಳಿದ್ದಾರೆ.
ರಾಮಾಯಣದ ಮುಂದೆ ಗೂಗಲ್ ಕೂಡ ವಿಫಲವಾಗಿದೆ. ರಾಮಾಯಣವನ್ನು ಬರೆದವರು ಋಷಿ ವಾಲ್ಮೀಕಿ, ಆಧ್ಯಾತ್ಮಿಕ ಪುಸ್ತಕದಲ್ಲಿ ಅವರು ಸೇರಿಸಿದ ಜ್ಞಾನ ಸರಿಯಾಗಿಯೇ ಇದೆ. ಗೂಗಲ್ ಎಂಜಿನ್ ತೋರಿಸುವ ಮಾಹಿತಿಗಿಂತ ವಾಲ್ಮೀಕಿ ಬರೆದ ಮಾಹಿತಿ ನಿಖರವಾಗಿದೆ ಎಂದಿದ್ದಾರೆ.

ದೇಶದ ರಾಜಕಾರಣದಲ್ಲಿ ಪ್ರಾಮುಖ್ಯ ಪಡೆಯಲು ಗೋತ್ರ ಹಾಗೂ ಜನಿವಾರ ತೋರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೆಸರನ್ನು ಹೇಳದೆ ಆದಿತ್ಯನಾಥ್ ಲೇವಡಿ ಮಾಡಿದ್ದಾರೆ. ಶಬರಿಮಲೆ ದೇವಸ್ಥಾನದಲ್ಲಿನ ಸಂಪ್ರದಾಯ ಗೊತ್ತಿದ್ದರೂ ಹಿಂದೂ ಧರ್ಮಕ್ಕೆ ಅವಮಾನ ಮಾಡುವ ಸಲುವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ದೇವಸ್ಥಾನಕ್ಕೇ ಹೋಗದವರು ಈಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕುಂಭ ಮೇಳವನ್ನು ದಲಿತ ವಿರೋಧಿ ಸಮಾವೇಶ ಎಂಬಂತೆ ಬಿಂಬಿಸುತ್ತಿದ್ದಾರೆ. ಎಲ್ಲ ಜಾತಿಯವರು ಕುಂಭ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ವೇದ ಮಂತ್ರಗಳನ್ನು ರಚಿಸಿರುವುದು ದಲಿತ ಸಂತರು. ರಾಮನ ಸಂದರ್ಶಿಸಿದವನು ಋಷಿ ವಾಲ್ಮೀಕಿ. ಆದರೆ ಆ ಸಮುದಾಯದ ಜನರ ಮೇಲೆ ಶೋಷಣೆ ಆಗಿದೆ ಎಂದಿದ್ದಾರೆ.












Click it and Unblock the Notifications