ಆಶಿಶ್ ಮಿಶ್ರಾಗೆ ಜಾಮೀನು: ಪ್ರಿಯಾಂಕಾ, ಅಖಿಲೇಶ್-ಜಯಂತ್ ಹೇಳಿದ್ದೇನು ಗೊತ್ತಾ?
ಲಕ್ನೋ ಫೆಬ್ರವರಿ 10: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಜಾಮೀನು ಮಂಜೂರು ಮಾಡಿದೆ. ಇದಾದ ಬಳಿಕ ವಿರೋಧ ಪಕ್ಷಗಳ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಸೇರಿದಂತೆ ಎಲ್ಲಾ ವಿರೋಧ ಪಕ್ಷದ ನಾಯಕರು ಚುನಾವಣೆಯ ನಡುವೆ ಆಶಿಶ್ ಮಿಶ್ರಾ ಅವರ ಜಾಮೀನಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಲಖಿಂಪುರ ಖೇರಿ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಪರ ವಕೀಲ ಸಲೀಲ್ ಕುಮಾರ್ ಶ್ರೀವಾಸ್ತವ ಅವರು, ಜಾಮೀನು ಅರ್ಜಿಯ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಆಶಿಶ್ ಮಿಶ್ರಾ ಅವರನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ. ಲಖಿಂಪುರ ಖೇರಿ ಪ್ರಕರಣದ ವೇಳೆ ಅವರು ಸ್ಥಳದಲ್ಲಿ ಇರಲಿಲ್ಲ ಎಂದರು. ಜೊತೆಗೆ ಕಾನೂನು ಪ್ರಕ್ರಿಯೆಗಳು ಮುಗಿದ ತಕ್ಷಣ ಅವರು 2 ದಿನಗಳಲ್ಲಿ ಜೈಲಿನಿಂದ ಹೊರಬರಬಹುದು ಎಂದಿದ್ದಾರೆ.

'ಸರ್ಕಾರವು ಕಠಿಣ ಶಿಕ್ಷೆಯನ್ನು ಖಚಿತಪಡಿಸಬೇಕು' ಅಖಿಲೇಶ್
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, "ಇಂದು ಆ ಹುಡುಗ (ಆಶಿಶ್ ಮಿಶ್ರಾ) ಜಾಮೀನು ಪಡೆದಿದ್ದಾನೆ, ನಿಮ್ಮನ್ನು ತುಳಿದವರು ಕೆಲವೇ ದಿನಗಳಲ್ಲಿ ಮತ್ತೆ ಬಹಿರಂಗವಾಗಿ ತಿರುಗಾಡುತ್ತಾನೆ" ಎಂದು ಹೇಳಿದರು. ಇನ್ನೂ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, "ಸರ್ಕಾರವು ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಬೇಕಾಗಿತ್ತು, ಆದರೆ ಅದು ವಿಫಲವಾಗಿದೆ. ಲಖಿಂಪುರ ಖೇರಿಯಲ್ಲಿ ನಡೆದ ಈ ಘಟನೆಯನ್ನು ಜಗತ್ತೇ ನೋಡಿದೆ. ರೈತರ ಸಾವಿಗೆ ಬಿಜೆಪಿಯೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ" ಎಂದು ಹರಿಹಾಯ್ದಿದ್ದಾರೆ.

ಸಚಿವರ ಮಗನಾಗಿದ್ದಕ್ಕೆ ಆಶಿಶ್‌ಗೆ ಜಾಮೀನು
ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರನಿಗೆ ಜಾಮೀನು ಸಿಕ್ಕಿದೆ, ಆದರೆ ಗಾಜಿಪುರ ಗಡಿ ಮತ್ತು ಲಖಿಂಪುರದಲ್ಲಿ ಸಾವನ್ನಪ್ಪಿದ ರೈತರಿಗೆ ನ್ಯಾಯ ಸಿಕ್ಕಿಲ್ಲ ಎಂದು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಪಿ ರಾಜ್‌ಭರ್ ಹೇಳಿದ್ದಾರೆ. ಬಿಜೆಪಿಗೆ ವೈಯಕ್ತಿಕ ಹಿತಾಸಕ್ತಿ ಇರುವಲ್ಲಿ ಆ ವ್ಯಕ್ತಿಗೆ ಜಾಮೀನು ಸಿಕ್ಕಿದೆ. ಅವರ ಹಿತಾಸಕ್ತಿ ಈಡೇರದಿದ್ದರೆ ಜಾಮೀನು ಇಲ್ಲ ಎಂದು ರಾಜ್‌ಭರ್ ಗಂಭೀರ ಆರೋಪ ಮಾಡಿದ್ದಾರೆ. ಸಚಿವರ ಪುತ್ರ ಎಂಬ ಕಾರಣಕ್ಕೆ ಆಶಿಶ್ ಮಿಶ್ರಾ ಅವರಿಗೆ ಜಾಮೀನು ನೀಡಲಾಗಿದೆ ಎಂದು ರಾಜಭರ್ ಹೇಳಿದ್ದಾರೆ. ಚುನಾವಣೆಯಲ್ಲಿ ಸೋಲುವುದು ಬಿಜೆಪಿಗೆ ಗೊತ್ತಿದೆ. ಈ ಜಾಮೀನು ತಮ್ಮ ಪ್ರಯತ್ನದ ಫಲ ಎಂಬ ಸಂದೇಶವನ್ನು ಸಮುದಾಯಕ್ಕೆ ರವಾನಿಸಲು ಜಾಮೀನು ಪಡೆಯುವ ಮೂಲಕ ಬ್ರಾಹ್ಮಣ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಆಶಿಶ್ ಮಿಶ್ರಾ ಜಾಮೀನಿನ ಬಗ್ಗೆ ವ್ಯಂಗ್ಯ
ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ಅಧ್ಯಕ್ಷ ಜಯಂತ್ ಚೌಧರಿ ಅವರು ಆಶಿಶ್ ಮಿಶ್ರಾ ಜಾಮೀನಿನ ಬಗ್ಗೆ ವ್ಯಂಗ್ಯವಾಡಿದ್ದಾರೆ. ಅವರು ಟ್ವೀಟ್‌ನಲ್ಲಿ, "ಏನಿದು ವ್ಯವಸ್ಥೆ !! ನಾಲ್ವರು ರೈತರನ್ನು ಬಲಿ ತೆಗೆದುಕೊಂಡವರಿಗೆ ನಾಲ್ಕು ತಿಂಗಳಲ್ಲಿ ಜಾಮೀನು ನೀಡಲಾಗಿದೆ'' ಎಂದು ಬರೆದಿದ್ದಾರೆ. ಕಳೆದ ವರ್ಷ ಅಕ್ಟೋಬರ್ 3 ರಂದು, ಲಖಿಂಪುರ ಖೇರಿಯ ಟಿಕುನಿಯಾದಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿ ಹಿಂದಿರುಗುತ್ತಿದ್ದರು. ಈ ವೇಳೆ ರೈತರ ಗುಂಪಿನ ಮೇಲೆ ವೇಗವಾಗಿ ಬಂದ ಎಸ್‌ಯುವಿ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದಲ್ಲಿ ಇತರ ನಾಲ್ವರು ಸಹ ಸಾವನ್ನಪ್ಪಿದ್ದಾರೆ. ಹಿಂಸಾಚಾರದಲ್ಲಿ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಕೂಡ ಕೊಲ್ಲಲ್ಪಟ್ಟಿದ್ದಾರೆ. ಯುಪಿ ಪೊಲೀಸರು ಮರುದಿನ ಆಶಿಶ್ ಮಿಶ್ರಾ ಮತ್ತು ಇತರ 12 ಮಂದಿಯನ್ನು ಕೊಲೆ ಆರೋಪಿಗಳೆಂದು ಹೆಸರಿಸಿ ಎಫ್‌ಐಆರ್ ದಾಖಲಿಸಿದ್ದರು. ಆದರೆ ಯಾರನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಖಂಡನೆಯ ನಂತರ ಕೇಂದ್ರ ಸಚಿವರ ಮಗನನ್ನು ಒಂದು ವಾರದ ನಂತರ ಬಂಧಿಸಲಾಯಿತು.

ರೈತ ಮತ ಕೈತಪ್ಪು ಸಾಧ್ಯತೆ
ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಗುರುವಾರ ಮತದಾನ ಆರಂಭವಾಗಿದೆ. ಬೆಳಗ್ಗೆ 7.00 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6.00 ಗಂಟೆಯವರೆಗೆ ಮತದಾನ ನಡೆಯಲಿದೆ. ರೈತ ಸಂಘಟನೆಗಳು ಲಖಿಂಪುರಖೇರಿ ಪ್ರಕರಣದಲ್ಲಿ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಸಚಿವರ ಮೇಲೆ ಕ್ರಮ ಕೈಗೊಳ್ಳುವುದಿರಲಿ ಪ್ರಮುಖ ಆರೋಪಿಗೆ ಜಾಮೀನು ಸಿಕ್ಕಿರುವುದು ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ರೈತ ಮತಗಳು ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ರೈತ ಮತಗಳು ಕೈತಪ್ಪುವ ಸಾಧ್ಯತೆಗಳು ಇವೆ. ಉತ್ತರಪ್ರದೇಶದಲ್ಲಿ ಚುನಾವಣೆ ಇಂದು ಆರಂಭವಾಗಿದ್ದು ಈ ವೇಳೆ ಲಖಿಂಪುರ ಪ್ರಮುಖ ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿರುವುದು ಬಿಜೆಪಿಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications