Breaking News: ಯುಪಿ ಚುನಾವಣೆ ಮುಂದೂಡಲು ಅಲಹಾಬಾದ್ ಹೈಕೋರ್ಟ್ ಒತ್ತಾಯ
ಲಕ್ನೋ, ಡಿಸೆಂಬರ್ 23: ಕೊರೊನಾವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವಿಕೆ ಭೀತಿ ನಡುವೆ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ಬೇಡ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳ ಅವಧಿಗೆ ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಒತ್ತಾಯಿಸಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಮೆರವಣಿಗೆಗಳನ್ನು ನಿಷೇಧಿಸುವಂತೆ ಕೋರ್ಟ್ ಸಲಹೆ ನೀಡಿದೆ.
ದೇಶದಲ್ಲಿ ಭಯ ಹುಟ್ಟಿಸುತ್ತಿರುವ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವಿಕೆ ನಡುವೆ ಚುನಾವಣಾ ಪ್ರಚಾರದ ಮೆರವಣಿಗೆಗಳನ್ನು ನಡೆಸದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಕೋರ್ಟ್ ಒತ್ತಾಯಿಸಿದೆ. ಈ ಬಗ್ಗೆ ಯಾವುದೇ ಪ್ರಕರಣದ ನಂಟು ಹೊಂದಿಲ್ಲದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅಲಹಾಬಾದ್ ಉಚ್ಛ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಪ್ರಚಾರ ನಿಲ್ಲಿಸದಿದ್ದರೆ ಅಪಾಯ ನಿಶ್ಚಿತ:
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರವನ್ನು ನಿಲ್ಲಿಸದಿದ್ದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಎದುರಿಸಿದ ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿಯನ್ನು ನೋಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಶೇಖರ್ ಯಾದವ್ ಎಚ್ಚರಿಸಿದ್ದಾರೆ.
ಪ್ರಚಾರದಲ್ಲಿ ನೆರೆದ ಜನರ ಮಧ್ಯೆ ಎಲ್ಲಿ ಸಾಮಾಜಿಕ ಅಂತರ?:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ನಡೆಸುವ ಸಭೆ, ಸಮಾರಂಭ ಮತ್ತು ಪ್ರಚಾರ ಸಮಾವೇಶಗಳು ಆತಂಕಕ್ಕೆ ಕಾರಣವಾಗಿವೆ. ಪ್ರತಿನಿತ್ಯ ನೂರಾರು ಪ್ರಕರಣಗಳು ದಾಖಲಾಗುವುದರ ನಡುವೆಯೂ ಚುನಾವಣಾ ಮೆರವಣಿಗೆ ಮತ್ತು ಸಮಾವೇಶಗಳನ್ನು ನಡೆಸಲಾಗುತ್ತಿದೆ.
ನಿತ್ಯ ಅಲ್ಲಿ ಕಿಕ್ಕಿರಿದು ತುಂಬಿರುವ ಜನರು ಸಾಮಾಜಿಕ ಅಂತರವನ್ನು ಯಾವುದೇ ಕಾರಣಕ್ಕೂ ಪಾಲಿಸಲು ಸಾಧ್ಯವಾಗುವುದಿಲ್ಲ ಎಂದು ಉಲ್ಲೇಖಿಸಿದ ನ್ಯಾಯಾಧೀಶರು, "ಹೊಸ ರೂಪಾಂತರದ ಒಮಿಕ್ರಾನ್‌ನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೋವಿಡ್‌ನ ಮೂರನೇ ಅಲೆ ಹೆಚ್ಚಾಗುವ ಸಾಧ್ಯತೆಯಿದೆ," ಎಂದರು. ನಂತರ ಕೊವಿಡ್-19 ಪ್ರಕರಣಗಳ ಸಂಖ್ಯೆಯ ಬಗ್ಗೆ ವರದಿಗಳನ್ನು ಉಲ್ಲೇಖಿಸಿದರು ಮತ್ತು ಲಾಕ್‌ಡೌನ್ ಅನ್ನು ಜಾರಿಗೊಳಿಸಿದ ದೇಶಗಳ ಬಗ್ಗೆ ಪ್ರಸ್ತಾಪಿಸಿದರು.
ರಾಜ್ಯಗಳಿಗೆ ಕೇಂದ್ರದಿಂದ ತಜ್ಞರ ತಂಡ:
ಹೊಸ ರೂಪಾಂತರದ ದೃಷ್ಟಿಯಿಂದ, ನಾವು ( "ಸತಾರ್ಕ್" ಮತ್ತು "ಸಾವಧಾನ್" ) ಎಚ್ಚರಿಕೆ ಮತ್ತು ಜಾಗರೂಕರಾಗಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ ಸಂಜೆ ಒಮಿಕ್ರಾನ್‌ನ ಕುರಿತು ನಡೆದ ಪರಿಶೀಲನಾ ಸಭೆಯ ನಂತರ ಪ್ರಧಾನಿ ಈ ರೀತಿ ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ, ಕೋವಿಡ್-ಸುರಕ್ಷಿತ ನಡವಳಿಕೆಯ ಅಗತ್ಯವು ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಒತ್ತಿ ಹೇಳಿದ್ದಾರೆ.
ಕಡಿಮೆ ವ್ಯಾಕ್ಸಿನೇಷನ್, ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣ, ಅಗತ್ಯ ಆರೋಗ್ಯ ಮೂಲಸೌಕರ್ಯ ಇಲ್ಲದ ರಾಜ್ಯಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ನೆರವು ನೀಡುವುದಕ್ಕೆ ಕೇಂದ್ರ ಸರ್ಕಾರವು ತಜ್ಞರ ತಂಡಗಳನ್ನು ಕಳುಹಿಸಬೇಕು ಎಂದು ಪ್ರಧಾನಿ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅಖಿಲೇಶ್ ಯಾದವ್ ಪ್ರಚಾರ ಕಾರ್ಯದಿಂದ ಹೆಚ್ಚಿತಾ ಆತಂಕ?
ತಮ್ಮ ಪತ್ನಿ ಡಿಂಪಲ್ ಯಾದವ್ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿದ ಹಿನ್ನೆಲೆ ಅಖಿಲೇಶ್ ಯಾದವ್ ಕೂಡಾ ಕೊವಿಡ್-19 ಸೋಂಕಿನ ಪರೀಕ್ಷೆಗೆ ಒಳಗಾಗುವ ಸಾಧ್ಯತೆಯಿದೆ. ಇದರ ಮಧ್ಯೆ ಗುರುವಾರ ಅಲಿಗಢದಲ್ಲಿ ರಾಷ್ಟ್ರೀಯ ಲೋಕದಳದ ನಾಯಕ ಜಯಂತ್ ಚೌಧರಿ ಜೊತೆಗೆ ಜಂಟಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅಖಿಲೇಶ್ ಪ್ರಚಾರ ನಡೆಸಿದರು. ಈ ಹಿಂದೆ ಕಳೆದ ಭಾನುವಾರ ಲಕ್ನೋ ಹಾಗೂ ಸೋಮವಾರ ಉತ್ತರ ಪ್ರದೇಶದ ಕೇಂದ್ರ ಮತ್ತು ಪಶ್ಚಿಮ ವಲಯಗಳಲ್ಲಿ ಪ್ರಚಾರ ನಡೆಸಿದ್ದರು. ಇದು ಈಗ ಒಂದಿಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.












Click it and Unblock the Notifications