ಮದ್ಯ ಕೊಡಿಸಲಿಲ್ಲ ಎಂದು ವರನನ್ನೇ ಕೊಂದ ಸ್ನೇಹಿತರು
ಉತ್ತರ ಪ್ರದೇಶ, ಡಿಸೆಂಬರ್ 16: ಕುಡಿಯಲು ಮದ್ಯ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪಲಿಮುಕಿಂಪುರ ಗ್ರಾಮದಲ್ಲಿ ನಡೆದಿದೆ.
28 ವರ್ಷದ ಬಬ್ಲು ಕೊಲೆಯಾದವ. ಈತನ ಮದುವೆ ಮಂಗಳವಾರ ನಡೆದಿದ್ದು, ಮದುವೆಯಾದ ಕೆಲ ಗಂಟೆಗಳ ನಂತರ ತನ್ನ ಸ್ನೇಹಿತರನ್ನು ಭೇಟಿಯಾಗಲು ಹೊರಟಿದ್ದಾನೆ. ಆ ಸಂದರ್ಭ ಸ್ನೇಹಿತರು ಮದುವೆ ಪಾರ್ಟಿ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ. ಪಾರ್ಟಿಯಲ್ಲಿ ಸ್ನೇಹಿತರು ಮದ್ಯ ಕುಡಿದಿದ್ದು, ಇನ್ನಷ್ಟು ಮದ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗಲೇ ಸಾಕಷ್ಟು ಕುಡಿದಿದ್ದು, ಇನ್ನೂ ಮದ್ಯ ಕೊಡಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾನೆ.
ಇದೇ ವಿಷಯಕ್ಕೆ ಜಗಳ ಉಂಟಾಗಿ ಚಾಕು ಇರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.

ಮುಖ್ಯ ಆರೋಪಿ ರಾಮ್ ಖಿಲಾಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಉಳಿದ ಐವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.












Click it and Unblock the Notifications