ವಾರಣಾಸಿಯ ಕೇಸರಿ ಸಮುದ್ರದಲ್ಲಿ ನರೇಂದ್ರ ಮೋದಿ ರೋಡ್ ಶೋ
Recommended Video

ವಾರಣಾಸಿ, ಏಪ್ರಿಲ್ 25: ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರು ರೋಡ್ ಶೋ ಪ್ರಾರಂಭವಾಗಿದ್ದು, ಎತ್ತ ಕಣ್ಣು ಹಾಯಿಸಿದರೂ ಸರ್ವವೂ ಕೇಸರಿ ಮಯವಾಗಿಬಿಟ್ಟಿದೆ.
5 ಗಂಟೆ ಸುಮಾರಿಗೆ ವಾರಣಾಸಿಗೆ ಆಗಮಿಸಿದ ನರೇಂದ್ರ ಮೋದಿ ಅವರು ಮೋದಿ ಅವರು ಲಂಕಾ ಘಾಟ್ ಬಳಿಯಲ್ಲಿ ಮಧನ ಮೋಹನ ಮಾಳವಿಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿ ನೆರೆದಿದ್ದವರಿಗೆ ವಿನಯದಿಂದ ನಡು ಬಾಗಿಸಿ ನಮಿಸಿ ರೋಡ್ ಶೋ ಪ್ರಾರಂಭಿಸಿದರು.
ನರೇಂದ್ರ ಮೋದಿ ಅವರು ತೆರೆದ ವಾಹನದಲ್ಲಿ ಕೈ ಬೀಸಿ ಹೋಗುತ್ತಿದ್ದರೆ, ಅವರ ಹಿಂದೆ ಮತ್ತೊಂದು ತೆರೆದ ವಾಹನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್ ಇನ್ನೂ ಹಲವು ಮುಖಂಡರು ಅವರನ್ನು ಹಿಂಬಾಲಿಸುತ್ತಿದ್ದಾರೆ.

ನರೇಂದ್ರ ಮೋದಿ ಅವರು ಸಾಗುತ್ತಿರುವ ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿರುವ ಜನ ಮೋದಿ ಪರ ಘೋಷಣೆಗಳನ್ನು ಎಡಬಿಡದೆ ಕೂಗುತ್ತಿದ್ದಾರೆ, ಮೋದಿ ಅವರ ಮೇಲೆ ವಾರಣಾಸಿಯ ಜನ ಪುಷ್ಪಾರ್ಚನೆ ಮಾಡುತ್ತಿದ್ದಾರೆ. ಕಿಲೋ ಮೀಟರ್ ಗಟ್ಟಲೆ ಕೇಸರಿ ತೊಟ್ಟ ಜನರು ಸಾಲುಗಟ್ಟಿ ನಿಂತು ಮೋದಿ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಮೋದಿ ಅವರ ರೋಡ್ ಶೋಗೆ ಬಿಗಿ ಭದ್ರತೆಯನ್ನೂ ಆಯೋಜಿಸಲಾಗಿದೆ. ಮೋದಿ ಅವರು ರೋಡ್ ಶೋ ಮಾಡುತ್ತಿರುವ ಕಾರಿನಲ್ಲಿಯೇ ಅವರೊಂದಿಗೆ ಸುಮಾರು ಆರು ಮಂದಿ ಕಪ್ಪು ಉಡುಗೆ ತೊಟ್ಟ ಎಸ್‌ಪಿಜಿ ಕಮಾಂಡೊಗಳು ಇದ್ದಾರೆ. ಮೋದಿ ಅವರ ಕಾರಿನ ಇಕ್ಕೆಲಗಳಲ್ಲೂ ಹಲವು ಮಂದಿ ಎಸ್‌ಪಿಜಿ ಕಮಾಂಡೋಗಳು ಸಾಗುತ್ತಿದ್ದಾರೆ. ಜನರು ದೂರದಿಂದಲೇ ಮೋದಿ ಅವರನ್ನು ಕಂಡು ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಮೋದಿ ಅವರು ಆರು ಗಂಟೆ ವೇಳೆಗೆ ಲಂಕಾ ಚೌಕ್ ದಾಟಿದ್ದು, ಇಂದು ಸುಮಾರು 6 ಕಿ.ಮೀ ದೂರದವರೆಗೆ ಅವರು ರೋಡ್ ಶೋ ನಡೆಸಲಿದ್ದಾರೆ. ಕೊನೆಗೆ ಗಂಗಾ ಆರತಿಯಲ್ಲಿ ಪಾಲ್ಗೊಂಡು ಗಂಗೆಗೆ ನಮಿಸಿ ರೋಡ್ ಶೋ ಅಂತ್ಯಗೊಳಿಸಲಿದ್ದಾರೆ. ನಾಳೆ ಮತ್ತೆ ಇದೇ ಕ್ಷೇತ್ರದಿಂದ ನಾಮಪತ್ರವನ್ನು ಮೋದಿ ಅವರು ಸಲ್ಲಿಸಲಿದ್ದಾರೆ.












Click it and Unblock the Notifications