ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವ, ನಾವೆಲ್ಲ ರಾಮಭಕ್ತರು: ಅಖಿಲೇಶ್ ಯಾದವ್
ಅಯೋಧ್ಯಾ, ಡಿಸೆಂಬರ್ 15: ಶ್ರೀರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನಾಗಿದ್ದು, ತಮ್ಮ ಪಕ್ಷದ ಸದಸ್ಯರು ರಾಮಭಕ್ತರು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ. ಶ್ರೀರಾಮನನ್ನು ಪೂಜಿಸಲು ತಾವು ಕುಟುಂಬದ ಸದಸ್ಯರ ಜತೆಗೆ ಅಯೋಧ್ಯಾಕ್ಕೆ ಶೀಘ್ರದಲ್ಲಿಯೇ ತೆರಳುವುದಾಗಿ ತಿಳಿಸಿದ್ದಾರೆ.
ಲಕ್ನೋದಿಂದ ಅಜಂಗಡಕ್ಕೆ ತೆರಳುವ ಮಾರ್ಗಮಧ್ಯೆ ಅಯೋಧ್ಯಾಕ್ಕೆ ತೆರಳಿದ್ದ ಅಖಿಲೇಶ್ ಯಾದವ್, ರಾಮ ತಮಗೆ ಸೇರಿದವನು ಎಂದಿದ್ದಾರೆ. 'ರಾಮ ಸಮಾಜವಾಗಿ ಪಕ್ಷಕ್ಜೆ ಸೇರಿದವನು. ನಾವು ರಾಮ ಭಕ್ತರು ಮತ್ತು ಕೃಷ್ಣನ ಭಕ್ತರು' ಎಂದು ಹೇಳಿದ್ದಾರೆ.
ತಾವು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಯೋಧ್ಯಾದ ವಲಯ ರಸ್ತೆಯಾದ ಪಾರಿಜಾತ ಮಾರ್ಗದಲ್ಲಿ ಪಾರಿಜಾತ ಗಿಡಗಳನ್ನು ನೆಡಲಾಗಿತ್ತು. ಸರಯೂ ನದಿ ತೀರದಲ್ಲಿ ದೀಪಗಳನ್ನು ಅಳವಡಿಸಲಾಗಿತ್ತು. ಜತೆಗೆ ಶ್ರೀರಾಮನ ಆರಾಧನೆಗೆ ಭಜನಾ ಸ್ಥಳದಲ್ಲಿ ಧ್ವನಿ ವ್ಯವಸ್ಥೆ ಕೂಡ ತಮ್ಮ ಸರ್ಕಾರ ಮಾಡಿತ್ತು ಎಂದಿದ್ದಾರೆ.

'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ರಾಜ್ಯದ ಸಣ್ಣಪುಟ್ಟ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲಿದೆ. ದೊಡ್ಡ ಪಕ್ಷಗಳೊಂದಿಗಿನ ಮೈತ್ರಿ ನಮಗೆ ಒಳ್ಳೆಯ ಅನುಭವ ನೀಡಿಲ್ಲ' ಎಂದು ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷವು 403 ಸೀಟುಗಳ ಪೈಕಿ ಕನಿಷ್ಠ 351 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಕೃಷಿ ಕಾಯ್ದೆಗಳು ರೈತರಿಗೆ ಡೆತ್ ವಾರಂಟ್‌ಗಳಾಗಿವೆ. ಕನಿಷ್ಠ ಬೆಂಬಲ ಬೆಲೆ ಸಿಗುವ ಬಗ್ಗೆ ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ವಿಚಾರವಾಗಿ ಸರ್ಕಾರವು ಅವರಿಗೆ ಶಾಸನಬದ್ಧ ಖಾತರಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications