ಮೋದಿ ವಿರುದ್ಧದ ಹೋರಾಟಕ್ಕೆ ಅಡ್ಡಬಂದರೆ ನಾಶ ಮಾಡ್ತೀನಿ: ಖುರ್ಷಿದ್ ವಿವಾದ
ಫರೂಕಾಬಾದ್, ಏಪ್ರಿಲ್ 24: ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, ಮೋದಿ ವಿರುದ್ಧದ ತಮ್ಮ ಹೋರಾಟಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅವರನ್ನು ಪುಡಿ ಪುಡಿ ಮಾಡುತ್ತೇನೆ ಎನ್ನುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದಾರೆ.
ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಘಟಬಂಧನದ (ಮೈತ್ರಿಕೂಟ) ವ್ಯಕ್ತಿಯೇ ಆಗಿರಲಿ ಅಥವಾ ಬಹುಜನ ಸಮಾಜ ಪಕ್ಷಕ್ಕೇ ಸೇರಿರಲಿ, ತಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
'ಮೋದಿ ವಿರುದ್ಧದ ನನ್ನ ಹೋರಾಟದಲ್ಲಿ ಯಾರಾದರೂ ಮಧ್ಯಪ್ರವೇಶಿಸಲು ಅಥವಾ ನನ್ನನ್ನು ತಡೆಯಲು ಪ್ರಯತ್ನಿಸಿದರೆ ಆತ ಘಟಬಂಧನ ಹೆಸರನ್ನಾದರೂ ಹೇಳಲಿ ಅಥವಾ ಆನೆಯ (ಬಿಎಸ್‌ಪಿ) ಹೆಸರನ್ನಾದರೂ ಹೇಳಿಕೊಳ್ಳಲಿ, ಆ ವಾಸ್ತವಗಳನ್ನು ನಾನು ಲೆಕ್ಕಿಸುವುದಿಲ್ಲ. ಆತನನ್ನು ನಾಶ ಮಾಡುತ್ತೇನೆ' ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಖುರ್ಷಿದ್, ತಾವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಅಪ್ಪ' ಎಂದು ಬಾಲಿವುಡ್ ಡೈಲಾಗ್ ಹೇಳಿದ್ದರು. 2008ರ ಬಾಟ್ಲಾ ಹೌಸ್ ಎನ್‌ಕೌಂಟರ್ ಬಗ್ಗೆ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದರು. ಯೋಗಿಗೆ ದನದ ಕೊಟ್ಟಿಗೆ ಇಷ್ಟವಾಗಿರುವುದರಿಂದ ಅಲ್ಲಿಯೇ ಚರ್ಚೆಗೆ ಸಿದ್ಧ ಎಂದಿದ್ದರು.












Click it and Unblock the Notifications