ಆಶಿಶ್ ಮಿಶ್ರಾ ಜಾಮೀನು ರದ್ದತಿಗಾಗಿ ಸರ್ಕಾರಕ್ಕೆ ಎಸ್‌ಐಟಿ 2 ಬಾರಿ ಮನವಿ
ಲಕ್ನೋ ಏಪ್ರಿಲ್ 4: ಲಖಿಂಪುರ ಖೇರಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಮತ್ತು ಪ್ರಕರಣದ ಪ್ರಧಾನ ಆರೋಪಿ ಆಶಿಶ್ ಮಿಶ್ರಾ ಅವರ ಜಾಮೀನು ರದ್ದುಗೊಳಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಎರಡು ಬಾರಿ ಶಿಫಾರಸು ಮಾಡಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜೊತೆಗೆ ಎಸ್‌ಐಟಿ ಅಕ್ಟೋಬರ್ 3ರ ವಿವರಗಳನ್ನು ಬಹಿರಂಗಪಡಿಸುತ್ತದೆ.
ಇಡೀ ದೇಶವನ್ನು ಬೆಚ್ಚಿಬೀಳಿಸಿದ ಲಖಿಂಪುರ ಖೇರಿ ಪ್ರಕರಣಕ್ಕೆ ಆರು ತಿಂಗಳು ಕಳೆದಿದೆ. ಆದರೆ ಈ ಪ್ರಕರಣ ಇನ್ನೂ ಇತ್ಯಾರ್ಥಕ್ಕೆ ಬರುತ್ತಿಲ್ಲ. ಈ ನಡುವೆ ಎಸ್‌ಐಟಿ ಅಕ್ಟೋಬರ್ 3 ರಂದು ನಡೆದ ಘಟನೆಯ ವಿವರಗಳನ್ನು ಬಹಿರಂಗಪಡಿಸಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಎಸ್‌ಐಟಿ ತಂಡವು ಹೀಗೆ ಹೇಳಿದೆ: "ಎಸ್‌ಐಟಿ ಮುಖ್ಯಸ್ಥರು, ಉತ್ತರ ಪ್ರದೇಶ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಗೆ 10/02/2022 ಮತ್ತು 14/02/2022 ರಂದು ಕ್ರಮವಾಗಿ ಪತ್ರ ಬರೆದು ಆರೋಪಿಯ ಜಾಮೀನು ರದ್ದುಗೊಳಿಸುವಂತೆ ಮನವಿ ಮಾಡಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಎಫ್‌ಐಆರ್ ಸಂಖ್ಯೆ 219/2021 ರಲ್ಲಿ ನಡೆಯುತ್ತಿರುವ ತನಿಖೆಯ ದೃಷ್ಟಿಯಿಂದ ಮತ್ತು ರಕ್ಷಣೆ ಒದಗಿಸಿರುವ 98 ಸಾಕ್ಷಿಗಳಿಗೆ ಬೆದರಿಕೆಯ ಸಾಧ್ಯತೆಯನ್ನು ಪರಿಗಣಿಸಿ ಆರೋಪಿಯ ಜಾಮೀನು ರದ್ದುಗೊಳಿಸುವಂತೆ ಯುಪಿ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಸುಪ್ರೀಂ ಕೋರ್ಟ್ ಗೆ ಎಸ್‌ಐಟಿ ತಿಳಿಸಿದೆ"
ಎಸ್‌ಐಟಿ ತನ್ನ ವರದಿಯಲ್ಲಿ ದಾಖಲೆಯಲ್ಲಿರುವ ಸಾಕ್ಷ್ಯಗಳ ಆಧಾರದ ಮೇಲೆ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಮತ್ತು ಇತರರು ಅಪರಾಧದ ಸ್ಥಳದಲ್ಲಿ ಇರುವುದು ರುಜುವಾತಾಗಿದೆ ಎಂದು ಹೇಳಿದೆ. ಇದಲ್ಲದೆ 13 ಆರೋಪಿಗಳು (ಮೂವರು ಸತ್ತ ಆರೋಪಿಗಳು) ಪೂರ್ವಯೋಜಿತ ರೀತಿಯಲ್ಲಿ ಅಪರಾಧದ ಸ್ಥಳಕ್ಕೆ ಹೋಗಿದ್ದಾರೆಂದು ಅದು ಹೇಳಿದೆ. ಬೆಂಗಾವಲುಪಡೆಯ ಮೂರು ವಾಹನಗಳನ್ನು ಬಳಸಿ, ಜನರಿಂದ ತುಂಬಿರುವ ಕಿರಿದಾದ ರಸ್ತೆಯಲ್ಲಿ ಅತಿ ವೇಗದಲ್ಲಿ ವಾಹನ ಓಡಿಸಲಾಗಿದೆ ಎಂದು ವರದಿ ಹೇಳಿದೆ.

ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಕೂಡ ದಂಗಲ್ ಕಾರ್ಯಕ್ರಮದ ಮುಖ್ಯ ಅತಿಥಿಯ ಮಾರ್ಗವನ್ನು ಬದಲಾಯಿಸಿದೆ ಮತ್ತು ಬದಲಾದ ಮಾರ್ಗದ ಬಗ್ಗೆ ಪ್ರಮುಖ ಆರೋಪಿಗೆ ಚೆನ್ನಾಗಿ ತಿಳಿದಿದೆ ಎಂದು ಅದು ಹೇಳಿದೆ.
ಎಸ್‌ಐಟಿ ಪ್ರಕಾರ ಅಪರಾಧ ಮಾಡಿದ ನಂತರ ಆರೋಪಿಗಳು ಪ್ರತಿಭಟನಾಕಾರರನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಮಾತ್ರವಲ್ಲದೆ ಈ ಶಸ್ತ್ರಾಸ್ತ್ರಗಳ ಎಫ್‌ಎಸ್‌ಎಲ್‌ನ ಬ್ಯಾಲಿಸ್ಟಿಕ್ ವರದಿಗಳು ಶಸ್ತ್ರಾಸ್ತ್ರಗಳ ಬಳಕೆಯನ್ನು ಖಚಿತಪಡಿಸುತ್ತದೆ ಎಂದು ವರದಿ ಹೇಳಿದೆ. ಹೀಗಾಗಿ ಸಾಕ್ಷಿಗಳಿಗೆ ಬೆದರಿಕೆಯ ಸಾಧ್ಯತೆಯನ್ನು ಪರಿಗಣಿಸಿ ಆರೋಪಿಗೆ ಜಾಮೀನು ರದ್ದುಗೊಳಿಸುವಂತೆ ಎಸ್‌ಐಟಿ ಮನವಿ ಮಾಡಿರುವುದಾಗಿ ಎಸ್‌ಐಟಿ ಅಕ್ಟೋಬರ್ 3 ರಂದು ವಿವರಗಳನ್ನು ಬಹಿರಂಗಪಡಿಸಿದೆ.

ಏನಿದು ಪ್ರಕರಣ?
ಅಕ್ಟೋಬರ್ 3ರಂದು ಲಖಿಂಪುರ ಖೇರಿಗೆ ಬಿಜೆಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಕೊಟ್ಟಿದ್ದರು. ಈ ವೇಳೆ ಮೌನವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದಿತ್ತು. ಈ ಘಟನೆ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಇದರಲ್ಲಿ ಪತ್ರಕರ್ತನೊಬ್ಬ, ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದರು. ರೈತರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಇದ್ದಿದ್ದನ್ನು ಕಣ್ಣಾರೆ ನೋಡಿದ್ದೇವೆ. ಇವರೆಲ್ಲ ಕಾರನ್ನು ಹರಿಸಿದ್ದಲ್ಲದೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎಂದು ಸ್ಥಳದಲ್ಲಿದ್ದ ರೈತರು ಹೇಳಿದ್ದರು. ವೈರಲ್ ಆದ ವಿಡಿಯೋದಲ್ಲಿ ಒಬ್ಬರು ಕಾರಿನಿಂದ ಇಳಿದು ಓಡಿದ ದೃಶ್ಯ ಕಂಡುಬಂದಿತ್ತು. ಅದಯ ಆಶಿಶ್ ಮಿಶ್ರಾ ಎಂದೇ ರೈತರು ಪ್ರತಿಪಾದಿಸಿದ್ದರು. ಬಳಿಕ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಎಸ್ಐಟಿಯನ್ನೂ ರಚಿಸಿತ್ತು.












Click it and Unblock the Notifications