ಭಾರತ Vs ಪಾಕಿಸ್ತಾನ T-20: "ಭಾರತದಲ್ಲಿ ಪಾಕ್ ಗೆಲುವನ್ನು ಸಂಭ್ರಮಿಸುವುದೇ ದೇಶದ್ರೋಹ"!
ಲಕ್ನೋ, ಅಕ್ಟೋಬರ್ 28: ಐಸಿಸಿ ವಿಶ್ವಕಪ್ ಟಿ-20 ಪಂದ್ಯದಲ್ಲಿ ಭಾರತದ ಎದುರು ಪಾಕಿಸ್ತಾನದ ಗೆಲುವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಗೆಲುವಿನ ವಿಜಯೋತ್ಸವ ಆಚರಿಸುವವರ ವಿರುದ್ಧ ಶಿಸ್ತುಕ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯೋತ್ಸವವನ್ನು ಭಾರತದಲ್ಲಿ ಆಚರಿಸಿದರೆ ಅಂಥವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸರಿಗೆ ಆದೇಶ ನೀಡಿದ್ದಾರೆ.
"ಪಾಕಿಸ್ತಾನದ ವಿಜಯವನ್ನು ಆಚರಿಸುವವರು ದೇಶದ್ರೋಹದ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಜೊತೆಗೆ ಸರ್ಕಾರದ ತೆಗೆದುಕೊಳ್ಳುವ ಕ್ರಮದ ಬಗ್ಗೆ ವರದಿ ಮಾಡಿರುವ ಪತ್ರಿಕೆಯ ಪ್ರತಿಯೊಂದನ್ನು ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನದ ವಿಜಯೋತ್ಸವ ಆಚರಿಸಿದವರ ಬಂಧನ:
ಐಸಿಸಿ T-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಅಥವಾ ಭಾರತದ ವಿರುದ್ಧ ಪಾಕಿಸ್ತಾನದ ವಿಜಯವನ್ನು ಆಚರಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಒಟ್ಟು ಐದು ಜಿಲ್ಲೆಗಳಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಆರೋಪಿಗಳು ಪಾಕಿಸ್ತಾನ ಗೆಲುವು ಸಾಧಿಸುತ್ತಿದ್ದಂತೆ ಪಟಾಕಿ ಸಿಡಿಸಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಅಲ್ಲದೇ, ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ಪಾಕಿಸ್ತಾನ ಪರ ಫೋಟೋ, ಸ್ಟೇಟಸ್ ಹಾಕಿಕೊಂಡಿದ್ದರು ಎಂದು ಗೊತ್ತಾಗಿದೆ.
ಆಗ್ರಾದಲ್ಲಿ ಮೂರು, ಬರೇಲಿ 2, ಲಕ್ನೋದಲ್ಲಿ ಒಬ್ಬರ ಬಂಧನ:
ಪಾಕಿಸ್ತಾನದ ಪರ ಹಾಗೂ ಭಾರತದ ವಿರುದ್ಧವಾಗಿ ಘೋಷಣೆ ಕೂಗಿದ ಮೂವರನ್ನು ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 505(1)ಬಿ, 153ಎ ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಪರವಾಗಿ ಸ್ಟೇಟಸ್ ಹಾಕಿದ್ದ ಇಬ್ಬರನ್ನು ಬರೇಲಿ ಹಾಗೂ ಒಬ್ಬನನ್ನು ಲಕ್ನೋದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪಾಕ್ ಗೆಲುವಿನ ಸಂಭ್ರಮ:
ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದನ್ನು ಜಮ್ಮು ಕಾಶ್ಮೀರದ ಹಲವು ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಪಟಾಕಿ ಸಿಡಿಸಿ ಜಯಘೋಷಣೆ ಕೂಗಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಭಾರತದ ವಿರುದ್ಧ ಪಾಕಿಸ್ತಾನದ ವಿಜಯವನ್ನು ಆಚರಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ಶ್ರೀನಗರದ ಕರಣ್ ನಗರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಎಸ್‌ಕೆಐಎಂಎಸ್ ಸೌರಾದಲ್ಲಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸಾಂಬಾ ಜಿಲ್ಲೆಯಲ್ಲೂ ಆರು ಮಂದಿಯನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮಾನವೀಯತೆಯ ಆಧಾರದ ಮೇಲೆ ಯುಎಪಿಎ ಆರೋಪಗಳನ್ನು ಹಿಂಪಡೆಯುವಂತೆ ಜೆ-ಕೆ ವಿದ್ಯಾರ್ಥಿ ಸಂಘವು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಒತ್ತಾಯಿಸಿತ್ತು.
ಪಾಕ್ ವಿಜಯೋತ್ಸವ ವಿರೋಧಿಸಿದರೆ ಜೀವ ಬೆದರಿಕೆ:
ICC ಟಿ-20 ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಜಮ್ಮು ಕಾಶ್ಮೀರದ ಶ್ರೀನಗರ್ ವೈದ್ಯಕೀಯ ವಿದ್ಯಾರ್ಥಿ ವಿರುದ್ಧ ದೂರು ನೀಡಿದವರಿಗೆ ಯುನೈಟೆಡ್ ಲಿಬರೇಶನ್ ಫ್ರಂಟ್ (ಯುಎಲ್ಎಫ್) ಉಗ್ರ ಸಂಘಟನೆ ಬೆದರಿಕೆ ಹಾಕಿದೆ. ವಿದ್ಯಾರ್ಥಿ ವಿರುದ್ಧ ದೂರು ನೀಡಿದವರು 48 ಗಂಟೆಗಳಲ್ಲಿ ದೂರು ವಾಪಸ್ ಪಡೆದುಕೊಂಡು ಕ್ಷಮೆಯಾಚಿಸಬೇಕು. "ಈ ಎಫ್‌ಐಆರ್‌ಗಳ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ನಾವು ಸಂಪೂರ್ಣ ಮಾಹಿತಿಯನ್ನು ಹೊಂದಿದ್ದೇವೆ. ಸ್ಥಳೀಯರಲ್ಲದ ನೌಕರರು ಮತ್ತು ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ," ಎಂದು ಉಗ್ರಗಾಮಿ ಗುಂಪು ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ ತಿಂಗಳ ಆರಂಭದಲ್ಲಿ ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿಯ ಹೊಣೆಯನ್ನು ಇದೇ ಯುಎಲ್‌ಎಫ್ ಸಂಘಟನೆ ವಹಿಸಿಕೊಂಡಿತ್ತು. .












Click it and Unblock the Notifications