ಹಿಂದುತ್ವದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ: ಖುರ್ಷಿದ್ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ
ಲಕ್ನೋ, ಡಿಸೆಂಬರ್ 23: ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್‌ರ ಪುಸ್ತಕದಲ್ಲಿರುವ ಹಿಂದೂ ಧರ್ಮವನ್ನು ಬೊಕೊ ಹರಾಮ್‌ನಂತಹ ಉಗ್ರವಾದಿ ಸಂಘಟನೆಗಳಿಗೆ ಹೋಲಿಕೆ ಮಾಡಿರುವುದರ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಮ್ಯಾಜಿಸ್ಟ್ರೇಟ್ ಶಾಂತನು ತ್ಯಾಗಿ ಆದೇಶಿಸಿದ್ದಾರೆ.
ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಮತ್ತು ಈ ವಿಷಯದಲ್ಲಿ ಸರಿಯಾದ ತನಿಖೆಯನ್ನು ನಡೆಸಲು ನ್ಯಾಯಾಲಯವು ಬಕ್ಷಿ ಕಾ ತಾಲಾಬ್ ಪೊಲೀಸ್ ಉಸ್ತುವಾರಿಗೆ ನಿರ್ದೇಶಿಸಿದೆ. ಹಾಗೆಯೇ, "ಎಫ್‌ಐಆರ್ ಅನ್ನು ಮೂರು ದಿನಗಳ ಒಳಗಾಗಿ ಕೋರ್ಟ್‌ಗೆ ಸಲ್ಲಿಕೆ ಮಾಡಬೇಕು," ಎಂದು ಕೂಡಾ ಮ್ಯಾಜಿಸ್ಟ್ರೆಟ್ ಸೂಚನೆ ನೀಡಿದ್ದಾರೆ. ಸಲ್ಮಾನ್ ಖರ್ಷಿದ್ ಹೇಳಿಕೆಯ ವಿರುದ್ಧ ಶುಭಂಗಿ ತಿವಾರಿ ಎಂಬವರು ಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣವನ್ನು ಎತ್ತಿಕೊಂಡ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
"ಅಯೋಧ್ಯೆಯಲ್ಲಿ ಸುರ್ಯೋದಯ: ನಮ್ಮ ಕಾಲದಲ್ಲಿ ರಾಷ್ಟ್ರತ್ವ" ಎಂಬ ಶೀರ್ಷಿಕೆಯಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಬರೆಯಲಾಗಿರುವ ಕೆಲವು ವಿಚಾರಗಳು ಭಾರೀ ವಿವಾದವನ್ನು ಸೃಷ್ಟಿ ಮಾಡಿದೆ. "ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ಇರುವ ಕೆಲವು ಅಂಶಗಳು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತದೆ. ಈ ಹಿನ್ನೆಲೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಲು ಹೇಳಿದೆ. ಆದರೆ ಪೊಲೀಸರು ಯಾವ ಕ್ರಮವೂ ಕೈಗೊಂಡಿಲ್ಲ. ಆದ್ದರಿಂದಾಗಿ ನಾನು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ," ಎಂದು ಅರ್ಜಿದಾರರು ಹೇಳಿದ್ದಾರೆ.

ಸಲ್ಮಾನ್ ಪುಸ್ತಕದಲ್ಲಿ ಏನಿದೆ?
ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೊಸ ಪುಸ್ತಕದಲ್ಲಿರುವ ಕೆಲವು ಅಂಶಗಳು ಭಾರೀ ವಿವಾದಕ್ಕೆ ಕಾರಣವಾಗಿದೆ. "ಸನಾತನ ಧರ್ಮ ಮತ್ತು ಋಷಿಗಳು, ಸಂತರ ಶಾಸ್ತ್ರೀಯವಾದ ಹಿಂದೂ ಧರ್ಮವನ್ನು ಹಿಂದುತ್ವವು ಬದಿಗೆ ತಳ್ಳಿದೆ. ಇತ್ತೀಚಿಗೆ ಹಿಂದುತ್ವವು ಐಸಿಸ್ ಹಾಗೂ ಬೊಕೊ ಹರಾಮ್‌ನಂತಹ (ಉಗ್ರವಾದಿ ಸಂಘಟನೆ) ಇಸ್ಲಾಂ ಜಿಹಾದಿಗಳ ಗುಂಪಿನಂತೆ ಆಕ್ರಮಣಕಾರಿ ಆಗಿದೆ" ಎಂದು ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಈ ಪುಸ್ತಕವನ್ನು ಸಲ್ಮಾನ್ ಖುರ್ಷಿದ್ ಸಮರ್ಥನೆ ಕೂಡಾ ಮಾಡಿಕೊಂಡಿದ್ದರು. "ನಾನು ಈ ಜನರನ್ನು ಭಯೋತ್ಪಾದಕರು ಎಂದು ಕರೆದಿಲ್ಲ. ನಾನು ಅವರು ಧರ್ಮವನ್ನು ವಿರೂಪ ಮಾಡುವವರಿಗೆ ಸಮನಾದವರು ಎಂದು ಹೇಳಿದ್ದೇನೆ. ಹಿಂದುತ್ವವು 'ಸನಾತನ ಧರ್ಮ' ಹಾಗೂ ಹಿಂದೂ ಧರ್ಮವನ್ನು ಬದಿಗೆ ತಳ್ಳಿದೆ. ಇದು ಬೊಕೊ ಹರಾಮ್ ಹಾಗೂ ಬೇರೆಯವರಂತೆ ಒಂದು ಆಕ್ರಮಣಕಾರಿ ಹಾಗೂ ದೃಢವಾದ ಸ್ಥಾನವನ್ನು ಪಡೆದುಕೊಂಡಿದೆ," ಎಂದು ಸಮರ್ಥನೆ ಮಾಡಿದ್ದಾರೆ.
ಈ ಬೆನ್ನಲ್ಲೇ ಸಲ್ಮಾನ್ ಖುರ್ಷಿದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಪ್ರತಿಭಟನೆ ನಡೆಸಿದೆ. ಳಿಕ ಸಲ್ಮಾನ್ ಖುರ್ಷಿದ್ ಮನೆಗೆ ಬೆಂಕಿ ಹಾಕಲಾಗಿದೆ. ನೈನಿತಾಲ್‌ನಲ್ಲಿನ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ನಿವಾಸವನ್ನು ಧ್ವಂಸ ಮಾಡಲಾಗಿದ್ದು, ಬೆಂಕಿ ಹಾಕಲಾಗಿದೆ. ಈ ಘಟನೆಯ ವಿಡಿಯೋ, ಚಿತ್ರವನ್ನು ಸಲ್ಮಾನ್ ಖುರ್ಷಿದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ದೆಹಲಿ ಕೋರ್ಟ್‌ನಲ್ಲೂ ಖುರ್ಷಿದ್ ವಿರುದ್ಧ ಅರ್ಜಿ
ಇನ್ನು ಸಲ್ಮಾನ್ ಖುರ್ಷಿದ್ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಕೆ ಆಗಿದೆ. ಈ ಪುಸ್ತಕದ ಮಾರಾಟ, ಖರೀದಿ ಹಾಗೂ ಪ್ರಕಟಣೆಯನ್ನು ನಿಷೇಧ ಮಾಡುವಂತೆ ಅರ್ಜಿದಾರರು ಕೋರಿದ್ದಾರೆ. "ಈ ಪುಸ್ತಕದಲ್ಲಿ ಹಿಂದುತ್ವವನ್ನು ಜಿಹಾದಿ ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಲಾಗಿದೆ. ಸಲ್ಮಾನ್ ಖುರ್ಷಿದ್ ಸಂಸತ್ತು ಸದಸ್ಯರ ಆಗಿದ್ದಾರೆ. ಹಾಗೆಯೇ ಮಾಜಿ ಸಚಿವರು ಕೂಡಾ ಹೌದು. ಹಾಗಿರುವಾಗ ಇವರು ಸಮಾಜದ ಮೇಲೆ ಹೆಚ್ಚು ಪ್ರಭಾವವನ್ನು ಬೀರುವ ವ್ಯಕ್ತಿ. ಹಾಗಿರುವಾಗ ಇಂತಹ ಹೇಳಿಕೆ ಸರಿಯಲ್ಲ. ಅವರ ಪುಸ್ತಕದ ದಿ ಸಾಪ್ರೋನ್ ಸ್ಕೈ (ಕೇಸರಿ ಆಕಾಶ) ಎಂಬ ಅಧ್ಯಾಯದಲ್ಲಿ, 113 ಪುಟದಲ್ಲಿ ಈ ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ. ಅವರ ಪುಸ್ತಕದಲ್ಲಿ ಹಿಂದೂ ವಿರೋಧಿ ಧೋರಣೆಗಳು ಇದೆ. ಇದು ದೇಶದ ಸುರಕ್ಷತೆ, ಶಾಂತಿ ಹಾಗೂ ಸೌರ್ಹಾದತೆಗೆ ಧಕ್ಕೆಯನ್ನು ಉಂಟು ಮಾಡುತ್ತದೆ," ಎಂದು ಆರೋಪ ಮಾಡಲಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications