ಬಿಜೆಪಿಯ ಭರವಸೆಗಳಿಗೆ ಮರುಳಾಗಬೇಡಿ, ಸಮಾಜವಾದಿ ಪಕ್ಷವನ್ನು ಗೆಲ್ಲಿಸಿ: ಮಮತಾ
ಲಕ್ನೋ, ಫೆಬ್ರವರಿ 8: ''ಬಿಜೆಪಿ ನೀಡುವ ಭರವಸೆಗಳಿಗೆ ಮರುಳಾಗಬೇಡಿ, ಮುಂಬರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿ, ಗೆಲ್ಲಿಸಿ'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ಮತ್ತು ಅವರನ್ನು ಗೆಲ್ಲಿಸಿ, ಬಿಜೆಪಿಯನ್ನು ಸೋಲಿಸುವಂತೆ ನಿಮ್ಮೆಲ್ಲರನ್ನು ಕೋರುತ್ತೇನೆ, ಬಿಜೆಪಿಯವರು ನೀಡುವ ಸುಳ್ಳು ಭರವಸೆಗಳಿಗೆ ಮರುಳಾಗಬೇಡಿ ಎಂದರು.
ಮಮತಾ 3ರಂದು ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಾಣಸಿಗೆ ಮಮತಾ ಭೇಟಿ ನೀಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತನ್ನೆಲ್ಲಾ ಶ್ರಮವನ್ನು ಬಿಜೆಪಿ ಹಾಕಿದರೂ ಕೂಡ ನಮ್ಮನ್ನು ಸೋಲಿಸಲು ಸಾಧ್ಯವಾಗಿಲ್ಲ, ಈಗ ಉತ್ತರ ಪ್ರದೇಶದಲ್ಲೂ ಅವರನ್ನು ಸೋಲಿಸುತ್ತೇವೆ, ಇದು ದೀದಿಯ ಪ್ರಮಾಣ ಎಂದಿದ್ದಾರೆ.

ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ರಾಜಕೀಯ ಮತ್ತು ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದಾರೆ. 2017ರ ವಿಧಾನಸಭೆ ಚುನಾವಣೆ ಹೊತ್ತಲ್ಲೂ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶಕ್ಕೆ ಬಂದು ಎಸ್ಪಿ ಪರ ಪ್ರಚಾರ ನಡೆಸಿದ್ದರು.
ಹಾಗೇ, ಅಖಿಲೇಶ್ ಯಾದವ್ ಕೂಡ 2011 ಮತ್ತು 2016ರ ಪಶ್ಚಿಮ ಬಂಗಾಳ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ದೀದಿ ಪರ ಪ್ರಚಾರ ನಡೆಸಿದ್ದರು. 2021ರಲ್ಲಿ ತಾವು ಹೋಗದೆ ಇದ್ದರೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪ-ಅಧ್ಯಕ್ಷ ಕಿರಣ್ಮಯ್ ನಂದಾ ಮತ್ತು ರಾಜ್ಯ ಸಭಾ ಸದಸ್ಯೆ ಜಯ ಬಚ್ಚನ್ರನ್ನು ಕಳಿಸಿದ್ದರು.
ಮಮತಾ ಬ್ಯಾನರ್ಜಿಯವರು ವಾರಾಣಸಿಗೆ ಭೇಟಿ ಕೊಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ. ಇನ್ನು ಉತ್ತರ ಪ್ರದೇಶದ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿಬಿಟ್ಟಿದ್ದಾರೆ. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಖಂಡಿತವಾಗಿ ಸ್ಪರ್ಧಿಸುತ್ತದೆ. ಬಿಜೆಪಿಯನ್ನು ಸೋಲಿಸಲು ಎಲ್ಲ ಪ್ರಾದೇಶಿಕ ಪಕ್ಷಗಳೂ ಒಂದಾಗಬೇಕು ಎಂದು ಹೇಳಿದ್ದಾರೆ.
ಉತ್ತರಪ್ರದೇಶಕ್ಕೆ ಹೊರಡುವ ಮುನ್ನ ಕೋಲ್ಕತ್ತದಲ್ಲಿ ಮಾತನಾಡಿದ್ದ ಅವರು, ಮುಂಬರುವ ಚುನಾವಣೆಗಳಲ್ಲಿ ಎಲ್ಲ ರಾಜ್ಯಗಳಲ್ಲೂ ಬಿಜೆಪಿಯನ್ನು ಸೋಲಿಸಬೇಕು. ಪ್ರಚಾರಕ್ಕೆ ಬರುವಂತೆ ಅಖಿಲೇಶ್ ಯಾದವ್ ನನ್ನನ್ನು ಕೇಳಿದ್ದಾರೆ. ಹಾಗಾಗಿ ಹೋಗುತ್ತಿದ್ದೇನೆ ಎಂದಿದ್ದರು.












Click it and Unblock the Notifications