ಅಕ್ರಮ ಗಣಿಗಾರಿಕೆ ತಡೆದಿದ್ದಕ್ಕೆ ಶಾಸಕರಿಗೇ ಜೀವ ಬೆದರಿಕೆ!
ಲಕ್ನೋ, ಜುಲೈ.29: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾ ಘಟನೆಯೊಂದು ಇತ್ತೀಚಿಗೆ ನಡೆದಿದ್ದು ಸಾಕಷ್ಟು ಸುದ್ದಿಯಾಗುತ್ತಿದೆ. ಶಾಸಕ ಮತ್ತು ಮುಖ್ಮಯಂತ್ರಿ ಭೇಟಿ ಇದೀಗ ಸಖತ್ ಸದ್ದು ಮಾಡುತ್ತಿದೆ.
ಭಾಗಪತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಯೋಗೇಶ್ ಧಾಮಾ ಅವರಿಗೆ ನಟೋರಿಯಸ್ ಗ್ಯಾಂಗಸ್ಟರ್ ಸುನೀಲ್ ರಥಿ ಜೀವ ಬೆದರಿಕೆವೊಡ್ಡಿರುವ ಬಗ್ಗೆ ದೂರಲಾಗಿದೆ. ಈ ಸಂಬಂಧ ಸ್ವತಃ ಶಾಸಕರೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಡಿಜಿಪಿ ಹಿತೇಶ್ ಚಂದ್ರ ಅವಸ್ಥಿರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಸುನೀಲ್ ರಥಿಯು ಕಳೆದ 2018ರ ಜುಲೈ.09ರಂದು ಭಾಗಪತ್ ಕಾರಾಗೃಹದಲ್ಲಿ ನಡೆದ ಭಜರಂಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಿಕೊಂಡಿದ್ದನು.
ಭಾಗಪತ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಯೋಗೇಶ್ ಧಾಮಾ, ತಿಹಾರ್ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಸುನೀಲ್ ರಥಿ ಎಂಬಾತನಿಂದ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಆರೋಪಿಸಿದರು.

ಅಕ್ರಮ ಗಣಿಗಾರಿಕೆ ತಡೆದಿದ್ದಕ್ಕೆ ಜೀವ ಬೆದರಿಕೆ:
ಬಾಗಪತ್ ಪ್ರದೇಶದಲ್ಲಿ ಗ್ಯಾಂಗ್ ಸ್ಟರ್ ಸುನೀಲ್ ರಥಿ ಸಂಬಂಧಿಕರು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ಇದನ್ನು ತಡೆದಿದ್ದಕ್ಕೆ ತಮ್ಮನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಇಂಥವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳದಿದ್ದರೆ ಸಮಾಜಕ್ಕೆ ಧಕ್ಕೆಯಾಗುತ್ತದೆ ಎಂದು ಶಾಸಕ ಯೋಗೇಶ್ ಧಾಮಾ ಕಿಡಿ ಕಾರಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಸಂದರ್ಭದಲ್ಲಿ ಈ ವಿಚಾರವಾಗಿ ದೂರು ನೀಡಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications