ಉತ್ತರ ಪ್ರದೇಶ ಚುನಾವಣೆ: ಸಮಾಜವಾದಿ ಪಕ್ಷದ ಎಬಿಸಿಡಿ ವಿಭಿನ್ನ- ಅಮಿತ್ ಶಾ
ಹರ್ದೋಯಿ, ಡಿಸೆಂಬರ್ 28: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳಲ್ಲಿ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಶುರುವಾಗಿದೆ. ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಂಗಳವಾರ (ಡಿಸೆಂಬರ್ 28) ಹರ್ದೋಯಿ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ, ಸಮಾಜವಾದಿ ಪಕ್ಷದ ಎಬಿಸಿಡಿಯ ಅರ್ಥವನ್ನು ಅಮಿತ್ ಶಾ ಸಾರ್ವಜನಿಕರಿಗೆ ವಿವರಿಸಿದರು. ಅಲ್ಲದೆ ಸಾರ್ವಜನಿಕರಿಗೆ ಪ್ರಶ್ನೆಗಳನ್ನು ಕೇಳಿದರು.
ಹರ್ದೋಯ್‌ನ ಸರ್ಕಾರಿ ಇಂಟರ್ ಕಾಲೇಜು ಮೈದಾನದಲ್ಲಿ ಚುನಾವಣಾ ಪ್ರಚಾರದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಲು ಅವಕಾಶ ನೀಡಿದ್ದಾರೋ ಇಲ್ಲವೋ? ಏನಿದು ಅಭಿವೃದ್ಧಿ? ಗೂಂಡಾಗಳು ಓಡಿಹೋದರೇ? ಬಡವರಿಗೆ ಆಹಾರ ಧಾನ್ಯ ಸಿಕ್ಕಿತೇ? ಈ ಸಂದರ್ಭದಲ್ಲಿ ಕಾನ್ಪುರದ ಪಿಯೂಷ್ ಜೈನ್ ಅವರನ್ನು ಉಲ್ಲೇಖಿಸಿದ ಶಾ, ಈ ಜನರು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು. ಕಾನ್ಪುರ ಉದ್ಯಮಿ ಜೈನ್ ಮನೆಯಿಂದ 250 ಕೋಟಿ ರೂ. ಬಂದಿರುವಂತೆ, ಕೇವಲ ಭ್ರಷ್ಟಾಚಾರ ಮಾತ್ರ ಇವರಿಂದ ಎದುರು ನೋಡಲು ಸಾಧ್ಯ ಎಂದಿದ್ದಾರೆ.
ಸಮಾಜವಾದಿ ಪಕ್ಷದ ಎಬಿಸಿಡಿ ವಿಭಿನ್ನವಾಗಿದೆ. ಅವರಿಗೆ 'ಎ' ಎಂದರೆ 'ಅಪರಾಧ ಮತ್ತು ಭಯೋತ್ಪಾದನೆ', ಬಿ ಎಂದರೆ 'ಸ್ವಜನಪಕ್ಷಪಾತ', ಸಿ ಎಂದರೆ 'ಭ್ರಷ್ಟಾಚಾರ' ಮತ್ತು ಡಿ ಎಂದರೆ 'ಗಲಭೆ'. ಇಷ್ಟೇ ಅಲ್ಲ ಉತ್ತರ ಪ್ರದೇಶದಲ್ಲಿ ಏನಾಗುತ್ತದೆ? ಹರ್ದೋಯಿಯವರ ಈ ರ್‍ಯಾಲಿ ನೋಡಿ ಉತ್ತರ ಸಿಗುತ್ತದೆ ಎಂದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬುದಕ್ಕೆ ಈ ಜನಸಂದಣಿಯೇ ಸಾಕ್ಷಿ. ಈ ಗೆಲುವು ಎಸ್‌ಪಿ, ಬಿಎಸ್‌ಪಿಯನ್ನು ಅಳಿಸಿ ಹಾಕುವ ವಿಜಯವಾಗಲಿದೆ ಎಂದು ರ್‍ಯಾಲಿಯನ್ನುದ್ದೇಶಿಸಿ ಹೇಳಿದರು.

ಇನ್ನೂ ಇತ್ತ ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಮಂಗಳವಾರ ಭಾರತೀಯ ಚುನಾವಣಾ ಆಯೋಗವು ರಾಜ್ಯಕ್ಕೆ ಮೂರು ದಿನಗಳ ಭೇಟಿ ಆರಂಭಿಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ ನೇತೃತ್ವದ ನಿಯೋಗವು ಮೂರು ದಿನಗಳ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದು, ಲಕ್ನೋದಲ್ಲಿ ರಾಜ್ಯದ ಎಲ್ಲ ರಾಷ್ಟ್ರೀಯ ಪಕ್ಷ ಹಾಗೂ ಸ್ಥಳೀಯ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಇದೇ ವೇಳೆ ಚುನಾವಣಾ ಆಯೋಗದ ನಿಯೋಗವು ಉತ್ತರ ಪ್ರದೇಶ ಪೊಲೀಸ್ ಹಾಗೂ ಕೇಂದ್ರೀಯ ಭದ್ರತಾ ಪಡೆಗಳ ಜೊತೆಗೆ ಚರ್ಚೆ ನಡೆಸಲಿದೆ.
ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಅನೂಪ್ ಚಂದ್ರ ಪಾಂಡೆ ಸೇರಿದಂತೆ ಇತರೆ ಹಿರಿಯ ಅಧಿಕಾರಿಳನ್ನೊಳಗೊಂಡ ಆಯೋಗ ಮಂಗಳವಾರದಿಂದ ಗುರುವಾರದವರೆಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮೊದಲ ದಿನ ರಾಷ್ಟ್ರೀಯ ಪಕ್ಷಗಳು ಮತ್ತು ರಾಜ್ಯದ ಪ್ರಾದೇಶಿಕ ಪಕ್ಷಗಳ ನಾಯಕರೊಂದಿಗೆ ಕೇಂದ್ರೀಯ ಚುನಾವಣಾ ಆಯೋಗದ ನಿಯೋಗವು ಚರ್ಚೆ ನಡೆಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ರಾಹುಲ್ ಶರ್ಮಾ ತಿಳಿಸಿದ್ದಾರೆ.
ಇತ್ತ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚುನಾವಣಾ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಅಖಿಲೇಶ್ ಯಾದವ್ ಅತ್ಯಂತ ಕಟ್ಟುನಿಟ್ಟಿನ ಹೆಜ್ಜೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ಅಖಿಲೇಶ್ ಅವರು ಬಿಜೆಪಿಯನ್ನು ಎದುರಿಸಲು ಸಣ್ಣ ಪಕ್ಷಗಳ ಸಹಾಯವನ್ನೂ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಅವರು ಯುಪಿಯಲ್ಲಿ ಗೆಲುವಿನ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಾಗಿದೆ. ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ(ಎಸ್‌ಬಿಎಸ್‌ಪಿ) 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ. ಅಖಿಲೇಶ್ ಈ ಬಾರಿ ಯಾವುದೇ ರೀತಿಯ ಚುನಾವಣಾ ಲೋಪವಾಗದಂತೆ ಪ್ರಯತ್ನಿಸುತ್ತಿದ್ದಾರೆ. ಹೊಸ ವರ್ಷದಲ್ಲಿ ಅಖಿಲೇಶ್ ಹೊಸ ಸವಾಲುಗಳನ್ನು ಎಷ್ಟು ಸಮರ್ಥವಾಗಿ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications