ಯುಪಿ ಚುನಾವಣೆಗೂ ಮುನ್ನ ರಾಜ್ಯದಲ್ಲಿ ದೈನಂದಿನ ಕೋವಿಡ್ ಪ್ರಕರಣ ಶೇ. 1,300 ಏರಿಕೆ
ಲಕ್ನೋ, ಜನವರಿ 09: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಇನ್ನು ಕೆಲವೇ ವಾರಗಳು ಇದೆ. ಈ ನಡುವೆ ರಾಜ್ಯದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ವರದಿಯಾದ 7,695 ಹೊಸ ಪ್ರಕರಣಗಳು ಕಳೆದ ವಾರ ದಾಖಲಾಗಿದ್ದಕ್ಕಿಂತ 13 ಪಟ್ಟು ಹೆಚ್ಚಾಗಿದೆ.
ಕಳೆದ ಭಾನುವಾರ ರಾಜ್ಯದಲ್ಲಿ 552 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇನ್ನು ಇಂದು ದಾಖಲಾದ 7,695 ಹೊಸ ಕೋವಿಡ್ ಪ್ರಕರಣಗಳ ಪೈಕಿ ರಾಜ್ಯದ ರಾಜಧಾನಿ ಲಕ್ನೋದ 1,115 ಕೋವಿಡ್ ಪ್ರಕರಣಗಳು ಸೇರಿದೆ. ದೆಹಲಿ ಬಳಿಯ ನೋಯ್ಡಾದಲ್ಲಿ 1149 ಕೋವಿಡ್ ದಾಖಲಾಗಿದೆ.
ರಾಜ್ಯದಲ್ಲಿ ನಾಲ್ಕು ಸಾವು ಕೂಡಾ ದಾಖಲಾಗಿದೆ. ಕೋವಿಡ್ ಪರೀಕ್ಷೆಯು ಕೂಡಾ ರಾಜ್ಯದಲ್ಲಿ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 2.22 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಚುನಾವಣೆಗೆ ಒಳಪಡುವ ರಾಜ್ಯವು ಇನ್ನೂ ಯಾವುದೇ ನಿರ್ಬಂಧಗಳನ್ನು ಘೋಷಿಸಿಲ್ಲ. ಕೋವಿಡ್ ಹಿನ್ನೆಲೆ ಶಾಲೆಯನ್ನು ಮುಚ್ಚಲಾಗಿದ್ದು ಅದನ್ನು ಜನವರಿ 16 ರವರೆಗೆ ವಿಸ್ತರಿಸಲಾಗಿದೆ.

ಇನ್ನು ರಾಜ್ಯದಲ್ಲಿ ನೈಟ್ ಕರ್ಫ್ಯೂ ಸಹ ಮುಂದುವರಿದಿದೆ. ಇನ್ನು ಕಳೆದ ವರ್ಷ ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆ ಕಂಡಿತ್ತು. ರಾಜ್ಯದ ಗಂಗಾ ನದಿಯಲ್ಲಿ ಮೃತ ದೇಹಗಳು ತೇಲಿ ಬಂದಿದ್ದು, ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇನ್ನು ಈ ವರ್ಷ ಪ್ರಸ್ತುತ ಸರ್ಕಾರವು ಲಸಿಕೆ ಹಾಕುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದೆ.
ಇಂದು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯಾದ್ಯಂತ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. "ಜನವರಿ 15 ರೊಳಗೆ ರಾಜ್ಯದ ಎಲ್ಲಾ ಅರ್ಹ ಹದಿಹರೆಯದವರಿಗೆ ಲಸಿಕೆ ಹಾಕುವ ಗುರಿಯನ್ನು ಸಾಧಿಸುವುದು ಸರ್ಕಾರದ ಪ್ರಯತ್ನವಾಗಿದೆ. ವಿಶೇಷ ಶಿಬಿರಗಳು ಮಾಧ್ಯಮಿಕ ಶಾಲೆಗಳಲ್ಲಿ ಆಯೋಜಿಸಬೇಕು. ಈ ವಾರದ ಅಂತ್ಯದ ವೇಳೆಗೆ 100 ಪ್ರತಿಶತ ಹದಿಹರೆಯದವರಿಗೆ ಕೋವಿಡ್ ಲಸಿಕೆಯನ್ನು ನೀಡಬೇಕು," ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications