ಅಧಿಕೃತವಾಗಿ ಬಿಜೆಪಿ ಸೇರಿದ ನಟಿ ಜಯಪ್ರದ, ಮಾಜಿ ದೋಸ್ತಿ ವಿರುದ್ಧ ಕಣಕ್ಕೆ?
ಲಕ್ನೋ, ಮಾರ್ಚ್ 26: ಹೆಸರಾಂತ ನಟಿ ಜಯಪ್ರದ ಅವರು ಅಧಿಕೃತವಾಗಿ ಮಂಗಳವಾರ ಬಿಜೆಪಿ ಸೇರಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒಂದು ಕಾಲದಲ್ಲಿ ತಮ್ಮ ಆಪ್ತರಾಗಿದ್ದ ಸಮಾಜವಾದಿ ಪಕ್ಷದ ಆಝಂ ಖಾನ್ ಅವರ ವಿರುದ್ಧವೇ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದೇ ಹೌದಾದರೆ ಮಾಜಿ ದೋಸ್ತಿಗಳಲು ಮುಖಾಮುಖಿಯಾಗಲಿದ್ದಾರೆ.

ಲೋಕಸಭಾ ಚುನಾವಣೆ ಏಪ್ರಿಲ್ 11 ರಂದು ಆರಂಭವಾಗಲಿದ್ದು, ಏಳು ಹಂತಗಳಲ್ಲಿ ನಡೆಯಲಿದೆ. ಮೇ 19 ರ ವರೆಗೆ ನಡೆಯಲಿರುವ ಚುನಾವಣೆಯ ಫಲಿತಾಂಶ ಮೇ.23 ರಂದು ಹೊರಬೀಳಲಿದೆ.
55 ವರ್ಷ ವಯಸ್ಸಿನ ಜಯಪ್ರದಾ ಅವರು ಸಮಾಜವಾದಿ ಪಕ್ಷದ ಟಿಕೆಟ್ ನಿಂದಲೇ ಎರಡು ಬಾರಿ (2004,2009) ರಾಂಪುರದ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ್ದರು. ಆದರೆ, 2010ರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಜತೆಗಿನ ಕಿತ್ತಾಟದಿಂದಾಗಿ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್ ಪಿ ಉಚ್ಛಾಟಿಸಿತ್ತು.
ತೆಲಗುದೇಶಂ ಪಕ್ಷದ ಮೂಲಕ ರಾಜಕೀಯ ಬದುಕು ಆರಂಭಿಸಿದ್ದ ಜಯಪ್ರದ, ಎಸ್ಪಿ ಯಿಂದ ಉಚ್ಛಾಟನೆಗೊಂಡ ನಂತರ ಎನ್ ಡಿಎ ಯತ್ತ ಒಲವು ತೋರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವಿಧಾನವನ್ನು ಸದಾ ಶ್ಲಾಘಿಸುತ್ತ, ಬಿಜೆಪಿ ಸೇರುವ ಸೂಚನೆ ನೀಡಿದ್ದ ಜಯಪ್ರದಾ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ರಾಂಪುರದಿಂದ ಸ್ಪರ್ಧೆಗಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕನ್ನಡ, ತೆಲುಗು, ಹಿಂದಿ ಸೇರಿದಂತೆ 70 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಜಯಪ್ರದಾ, ಅವರು 2014ರಲ್ಲಿ ರಾಷ್ಟ್ರೀಯ ಲೋಕದಳ ಟಿಕೆಟ್ ಪಡೆದು ಬಿಜ್ನೋರ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು.












Click it and Unblock the Notifications