ಎಬಿಪಿ ನ್ಯೂಸ್ ಸಮೀಕ್ಷೆ : ಉಪ್ರದಲ್ಲಿ ಮಹಾಘಟಬಂಧನ್ ಆದರೆ ಎನ್ಡಿಎಗೆ ಸಂಕಷ್ಟ

ನವದೆಹಲಿ, ಅಕ್ಟೋಬರ್ 04 : ಮುಂದಿನ ವರ್ಷ 2019ರ ಏಪ್ರಿಲ್ ಅಥವಾ ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಈಕ್ಷಣ ನಡೆದರೆ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ಉತ್ತರ ಪ್ರದೇಶದಲ್ಲಿ ಉಳಿದ ಪಕ್ಷಗಳು ಒಗ್ಗಟ್ಟಾದರೆ ಎನ್ಡಿಎಗೆ ಸೋಲಾಗುವುದೆ?

ಈ ಪ್ರಶ್ನೆ ಇಟ್ಟುಕೊಂಡು ಎಬಿಪಿ ನ್ಯೂಸ್ ಮತ್ತು ಸಿವೋಟರ್ ಜಂಟಿಯಾಗಿ ನಡೆಸಿದ 'ದೇಶ್ ಕಾ ಮೂಡ್' ಚುನಾವಣಾಪೂರ್ವ ಸಮೀಕ್ಷೆ ಹಲವಾರು ಆಶ್ಚರ್ಯಕರ ಸಂಗತಿಗಳನ್ನು ಹೊರಹಾಕಿದೆ. ಕಳೆದ ಮಹಾಚುನಾವಣೆಯಲ್ಲಿ 80ರಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದು ಜಯಭೇರಿ ಬಾರಿಸಿದ್ದ ಬಿಜೆಪಿಗೆ ಈ ಬಾರಿ ಆಘಾತಕರ ಫಲಿತಾಂಶ ಲಭಿಸಲಿದೆ.

ಇದೆಲ್ಲ ಸಾಧ್ಯವಾಗುವುದು ಸಮಾಜವಾದಿ ಪಕ್ಷ, ತನ್ನ ಬದ್ಧವೈರಿ ಬಹುಜನ ಸಮಾಜವಾದಿ ಪಕ್ಷದೊಡನೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಾ? ಅಥವಾ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ ಜೊತೆ ಸೇರಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಪಕ್ಷ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದೊಡನೆ ಕೈಜೋಡಿಸುವುದಾ? ಎಂಬುದರ ಮೇಲೆ.

ಆದರೆ, ಈ ಎಲ್ಲ ಪರ್ಮ್ಯುಟೇಷನ್ ಕಾಂಬಿನೇಷನ್ ಗಳನ್ನು ನೋಡಿದರೆ, ಒಂದು ವೇಳೆ ಭಾರತೀಯ ಜನತಾ ಪಕ್ಷದ ವಿರೋಧಿಗಳು ಒಗ್ಗೂಡಿದರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎಗೆ ಕಳೆದ ಬಾರಿಗಿಂತ ಕಡಿಮೆ ಸೀಟುಗಳು ಸಿಗುವುದು ಖಚಿತ.

ಕಾಂಗ್ರೆಸ್ಸನ್ನು ಮಹಾಘಟಬಂಧನದಿಂದ ಹೊರಗಿಟ್ಟರೆ

ಕಾಂಗ್ರೆಸ್ಸನ್ನು ಮಹಾಘಟಬಂಧನದಿಂದ ಹೊರಗಿಟ್ಟರೆ

ಒಂದು ವೇಳೆ ಮೈತ್ರಿಗೆ ಮೀನ ಮೇಷ ಎಣಿಸುತ್ತಿರುವ ಬಹುಜನ ಸಮಾಜವಾದಿ ಪಕ್ಷದ ಅಧಿನಾಯಕಿ ಮಾಯಾವತಿ ಅವರು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಜೊತೆ ಕೈಜೋಡಿಸಿ, ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟರೆ ಅಥವಾ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದರೆ, ಮಹಾಘಟಬಂಧನ್ 42 ಸೀಟುಗಳನ್ನು ಗೆಲ್ಲಲಿದೆ, ಎನ್‌ಡಿಎಗೆ 36 ಮತ್ತು ಕಾಂಗ್ರೆಸ್ಸಿಗೆ ಕೇವಲ 2 ಸೀಟುಗಳು ಲಭಿಸಲಿವೆ.

ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಕೈಜೋಡಿಸಿದರೆ

ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಕೈಜೋಡಿಸಿದರೆ

ಇದೆಲ್ಲ ತಾಪತ್ರಯವೇ ಬೇಡವೆಂದು, ಕಾಂಗ್ರೆಸ್ ಪಕ್ಷ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಬಹುಜನ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಿದರೆ, ಮಹಾಘಟಬಂಧನ್ 56 ಸೀಟುಗಳನ್ನು ಗೆದ್ದು ಬಿಜೆಪಿಗೆ ಭಾರೀ ಹೊಡೆತ ನೀಡಲಿದೆ. ಕಳೆದ ಬಾರಿ 71 ಸೀಟು ಗೆದ್ದಿದ್ದ ಬಿಜೆಪಿ ನೇತೃತ್ವದ ಎನ್ಡಿಎ ಕೇವಲ 24 ಸೀಟುಗಳಿಗೆ ಸಮಾಧಾನ ಪಟ್ಟುಕೊಳ್ಳಲಿದೆ.

ಮಾಯಾವತಿ ಏಕಾಂಗಿಯಾಗಿ ಸ್ಪರ್ಧಿಸಿದರೆ

ಮಾಯಾವತಿ ಏಕಾಂಗಿಯಾಗಿ ಸ್ಪರ್ಧಿಸಿದರೆ

ಆದರೆ, ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು ಈ ಎಲ್ಲ ಪಕ್ಷಗಳ ಗೊಡವೆಯೇ ಬೇಡವೆಂದು ಏಕಾಂಗಿಯಾಗಿ ಸ್ಪರ್ಧಿಸಿದರೆ ಏನಾಗಲಿದೆ? ಈ ಫಲಿತಾಂಶ ನೋಡಿದರೆ ಮಾಯಾವತಿಯವರ ಕಾಲಕೆಳಗಿನ ನೆಲ ಬಿರಿಯುವುದು ಗ್ಯಾರಂಟಿ. ಪ್ರಧಾನಿಯಾಗುವ ಕನಸು ಕಾಣುತ್ತಿರುವ ಮಹತ್ವಾಕಾಂಕ್ಷಿ ರಾಜಕಾರಣಿ ಮತ್ತು ಕಾಂಗ್ರೆಸ್ ಅನ್ನು ಎಲ್ಲ ರಾಜ್ಯಗಳಲ್ಲಿಯೂ ದೂರವಿಟ್ಟಿರುವ ಮಾಯಾವತಿ ಅವರು ಏಕಾಂಗಿಯಾಗಿ ಸ್ಪರ್ಧಿಸಿದರೆ ಒಂದೂ ಸೀಟು ಗೆಲ್ಲುವುದಿಲ್ಲ ಎನ್ನುತ್ತದೆ ಸಮೀಕ್ಷೆ. ಬಿಜೆಪಿ ನೇತೃತ್ವದ ಎನ್ಡಿಎ ಮತ್ತೆ 70 ಸೀಟುಗಳನ್ನು ಗೆಲ್ಲಲಿದೆ, ಕಾಂಗ್ರೆಸ್ 2 ಸೀಟು ಮತ್ತು ಉಳಿದ ಸೀಟುಗಳು ಇತರ ಪಕ್ಷಗಳ ಪಾಲಾಗಲಿವೆ.

ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ್ ಆಗುವುದೆ?

ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ್ ಆಗುವುದೆ?

ಇದೆಲ್ಲ ಫಲಿತಾಂಶವನ್ನು ನೋಡಿದರೆ, ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು, ಒಣ ಪ್ರತಿಷ್ಠೆಗಳನ್ನು ದೂರ ಮಾಡಿಕೊಂಡು ಮೈತ್ರಿ ಮಾಡಿಕೊಳ್ಳದೆ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಮತ್ತು ಎಲ್ಲ ರಾಜ್ಯಗಳಲ್ಲಿ ಸೋಲಿನ ವಾಸನೆ ಹಿಡಿದಿರುವ ಕಾಂಗ್ರೆಸ್ ಪಕ್ಷಗಳು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಗ್ಗೂಡದೆ ಬೇರೆ ದಾರಿಯೇ ಇಲ್ಲ. ಒಂದು ವೇಳೆ ಮಹಾಘಟಬಂಧನ್ ವಿಫಲವಾದರೆ ಎಲ್ಲ ಪಕ್ಷಗಳು ಮನೆದಾರಿ ಹಿಡಿಯುವುದು ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+