Koppal: ಹಂಪಿ ಬಳಿ ಪ್ರವಾಸಿ ಪುರುಷರನ್ನು ಕಾಲುವೆಗೆ ತಳ್ಳಿ ಮಹಿಳೆಯರ ಮೇಲೆ ಅತ್ಯಾಚಾರ ಕೇಸ್: ಓರ್ವನ ಮೃತ ದೇಹ ಪತ್ತೆ
ಕೊಪ್ಪಳ ಮಾರ್ಚ್ 8: ಐತಿಹಾಸಿಕ ಸ್ಥಳ ಹಂಪಿ ಬಳಿಯಲ್ಲಿ ದುಷ್ಕೃತ್ಯವೊಂದು ನಡೆದಿದೆ. ದುಷ್ಕರ್ಮಿಗಳು ಇಸ್ರೇಲ್ ಪ್ರವಾಸಿ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ. ಈ ಘಟನೆ ದೇಶ ವಿದೇಶಗಳಿಂದ ಬರುವ ಪ್ರವಾಸಿಗರನ್ನು ಮಾತ್ರವಲ್ಲದೇ ಸ್ಥಳೀಯರನ್ನೂ ಬೆಚ್ಚಿ ಬೀಳಿಸಿದೆ.
ಹೌದು.. ಗಂಗಾವತಿ ತಾಲೂಕಿನ ಜನಪ್ರಿಯ ಸಣಾಪುರ ಸರೋವರದ ದಡದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳು 27 ವರ್ಷದ ಇಸ್ರೇಲಿ ಮಹಿಳಾ ಪ್ರವಾಸಿ ಮತ್ತು ಹೋಂಸ್ಟೇಯ 29 ವರ್ಷದ ಮಹಿಳಾ ನಿರ್ವಾಹಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೂವರು ಪ್ರವಾಸಿಗರನ್ನು ದುಷ್ಕರ್ಮಿಗಳು ಕಾಲುವೆಗೆ ತಳ್ಳಿ, ನಂತರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಎಸ್ಕೇಪ್ ಆಗಿದ್ದರು.

ಘಟನೆ ನಡೆದಿದ್ದು ಹೇಗೆ?
ಎಫ್‌ಐಆರ್ ಪ್ರಕಾರ ನಾಲ್ಕು ಪ್ರವಾಸಿಗರು ಮತ್ತು ಅವರು ತಂಗಿದ್ದ ಹೋಂಸ್ಟೇಯ ನಿರ್ವಾಹಕರು ಸಣಾಪುರ ಸರೋವರದ ಬಳಿ ನಕ್ಷತ್ರಗಳನ್ನು ನೋಡುತ್ತಾ ಗಿಟಾರ್ ನುಡಿಸುತ್ತಾ ಆನಂದಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಇಲ್ಲಿ ಪೆಟ್ರೋಲ್ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದ್ದಾರೆ.
ಹೋಂಸ್ಟೇ ನಿರ್ವಾಹಕಿ ಹತ್ತಿರದಲ್ಲಿ ಪೆಟ್ರೋಲ್ ಪಂಪ್ ಇಲ್ಲ ಎಂದು ಹೇಳಿದ್ದಾರೆ. ಆಗ ಆ ಮೂರು ಜನ 100 ರೂಪಾಯಿ ನೀಡುವಂತೆ ಹೋಂಸ್ಟೇ ನಿರ್ವಾಹಕಿ ಒತ್ತಾಯಿಸಿದ್ದಾರೆ. ಐವರು ಯಾವುದೇ ಹಣವನ್ನು ನೀಡಲು ನಿರಾಕರಿಸಿದಾಗ ದುಷ್ಕರ್ಮಿಗಳು ಮೂವರು ಪುರುಷ ಪ್ರವಾಸಿಗರ ಮೇಲೆ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದಾರೆ.

ಪುರುಷ ಪ್ರವಾಸಿಗರು ಕಾಲುವೆಯಿಂದ ಹೊರಬರಲು ಕಷ್ಟಪಡುತ್ತಿದ್ದಾಗ, ಮೂವರು ಆರೋಪಿಗಳು 27 ವರ್ಷದ ಇಸ್ರೇಲಿ ಮಹಿಳಾ ಪ್ರವಾಸಿ ಮತ್ತು ಹೋಂಸ್ಟೇಯ 29 ವರ್ಷದ ಮಹಿಳಾ ನಿರ್ವಾಹಕಿಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. 20ರ ಹರೆಯದ ಆರೋಪಿಗಳು ಕನ್ನಡ ಮತ್ತು ತೆಲುಗು ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕಾಲುವೆಗೆ ತಳ್ಳಿದವರು ಏನಾದರು?
ಕಾಲುವಿಗೆ ತಳ್ಳಿದ ಮೂವರಲ್ಲಿ ಇಬ್ಬರು ಕಷ್ಟಪಟ್ಟು ಈಜಿ ದಡ ಸೇರಿದ್ದರು. ಓಡಿಸ್ಸಾದ ಬಿಬಾಸ್ ಎಂಬಾತ ಮಾತ್ರ ಪತ್ತೆ ಆಗಿರಲಿಲ್ಲ. ಆದರೆ ಇಂದು ಅವರ ಮೃತದೇಹ ಪತ್ತೆಯಾಗಿದೆ. ಕಾಲುವೆಗೆ ತಳ್ಳಿದ ಬಳಿಕ ಅಮೆರಿಕ ಮತ್ತು ಮಹಾರಾಷ್ಟ್ರದ ಇಬ್ಬರು ಪುರುಷ ಪ್ರವಾಸಿಗರು ಗಾಯಗೊಂಡು ಕಷ್ಟಪಟ್ಟು ಈಜಿ ದಡ ಸೇರಿದ್ದಾರೆ. ಆದರೆ ಒಡಿಶಾದ ಬಿಬಾಸ್ ಮಾತ್ರ ಪತ್ತೆ ಆಗಿರಲಿಲ್ಲ. ಮಾಹಿತಿ ಪಡೆದ ಪೊಲೀಸರು ಹಲ್ಲೆಗೊಳಗಾದವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.
ಬಳಿಕ ನಾಪತ್ತೆಯಾದ ಓಡಿಸಾ ಪ್ರವಾಸಿ ಪತ್ತೆಗೆ ಕಾರ್ಯಚರಣೆ ನಡೆಸಿದ್ದರು. ಶ್ವಾನ ದಳಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆಯಿಂದ ನಾಪತ್ತೆಯಾದ ಓಡಿಸಾ ಪ್ರವಾಸಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ದೇಹ ಪತ್ತೆಯಾಗಿರಲಿಲ್ಲ. ಘಟನೆ ನಡೆದು ಎರಡು ದಿನಗಳ ಬಳಿಕ ಅಂದರೆ ಇಂದು ಮೃತದೇಹ ಪತ್ತೆಯಾಗಿದೆ. ಪ್ರಸ್ತುತ ಮೃತನ ಕುಟುಂಬಕ್ಕೆ ವಿಷಯ ತಿಳಿಸಿಲಾಗಿದೆ.
ಸಂತ್ರಸ್ತ ಮಹಿಳೆಯರು, ಪ್ರವಾಸಿಗರಿಂದ ದೂರು
ಬಳಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯರು ಹಾಗೂ ಹಲ್ಲೆಗೊಳಗಾದ ಪುರುಷರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಘಾತಕಾರಿ ಘಟನೆಯ ಹಿಂದಿನ ಅಪರಾಧಿಗಳಿಗಾಗಿ ಪೊಲೀಸರ ಆರು ತಂಡಗಳು ಹುಡುಕಾಟ ನಡೆಸುತ್ತಿವೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 309(6) (ಕಳ್ಳತನ ಅಥವಾ ಸುಲಿಗೆ), 311 (ಸಾವು ಅಥವಾ ತೀವ್ರ ಗಾಯವನ್ನುಂಟುಮಾಡುವ ಉದ್ದೇಶದಿಂದ ದರೋಡೆ), 64 (ಅತ್ಯಾಚಾರ), 70(1) (ಸಾಮೂಹಿಕ ಅತ್ಯಾಚಾರ), 109 (ಕೊಲೆಗೆ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಮಾತನಾಡಿ, ಬದುಕುಳಿದ ಮಹಿಳೆಯರಿಂದ ದೂರು ಬಂದಿದ್ದು, ಮೂವರು ಅಪರಿಚಿತ ವ್ಯಕ್ತಿಗಳು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಮತ್ತು ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ. ಆರೋಪಿಗಳ ಪತ್ತೆಗೆ ನಾವು ಪೊಲೀಸ್ ತಂಡವನ್ನು ರಚನೆ ಮಾಡಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಘಟನೆ ಹಂಪಿಯಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಮತ್ತು ವಿದೇಶಿ ಪ್ರವಾಸಿಗರಲ್ಲಿ ದೊಡ್ಡ ಆಕರ್ಷಣೆಯಾಗಿರುವ ಸರೋವರದ ಸುತ್ತಲಿನ ಭದ್ರತೆಯ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.












Click it and Unblock the Notifications