ಅಯೋಧ್ಯೆ-ಅಂಜನಾದ್ರಿ ನಡುವೆ ರೈಲು: ವಿ. ಸೋಮಣ್ಣ ಭರವಸೆ ಏನು
ಕೊಪ್ಪಳ, ಜನವರಿ 15: ಉತ್ತರ ಪ್ರದೇಶದ ಅಯೋಧ್ಯೆ ಮತ್ತು ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ನಡುವೆ ರೈಲು ಸಂಪರ್ಕ ಬೇಕು ಎಂಬುದು ಬೇಡಿಕೆಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ, ಲೋಕಾರ್ಪಣೆಯಾದ ಬಳಿಕ ರೈಲಿಗೆ ಬೇಡಿಕೆ ಹೆಚ್ಚಾಗಿದೆ. ಈ ಕುರಿತು ಈಗ ರೈಲ್ವೆ ಸಚಿವರು ಮಾತನಾಡಿದ್ದಾರೆ.
ತುಮಕೂರು ಸಂಸದ, ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳವಾರ ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿ ನೈಋತ್ಯ ರೈಲ್ವೆ ವತಿಯಿಂದ ಆಯೋಜಿಸಲಾಗಿದ್ದ ರೈಲ್ವೆ ಮೇಲ್ಸೇತುವೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವಿ. ಸೋಮಣ್ಣ, ಅಯೋಧ್ಯೆ ಮತ್ತು ಅಂಜನಾದ್ರಿ ನಡುವಿನ ರೈಲು ಸೇವೆ ಕುರಿತು ಮಾತನಾಡಿದರು. "ರೈಲ್ವೆ ಇಲಾಖೆಯಿಂದ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟ ಭಾಗದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ" ಎಂದು ಹೇಳಿದರು.
ಪ್ರಸ್ತಾವನೆ ಸ್ವೀಕಾರ ಮಾಡಲಾಗಿದೆ: ಸಚಿವ ವಿ. ಸೋಮಣ್ಣ ಮಾತನಾಡಿ, "ಅಯೋಧ್ಯೆ- ಅಂಜನಾದ್ರಿ ನಡುವೆ ರೈಲು ಓಡಿಸುವ ಕುರಿತು ಪ್ರಸ್ತಾವನೆ ಸ್ವೀಕಾರ ಮಾಡಿದ್ದೇನೆ. ಈ ಕುರಿತು ಪರಿಶೀಲನೆ ನಡೆಸುತ್ತೇವೆ" ಎಂದು ತಿಳಿಸಿದರು.
"ಅಂಜನಾದ್ರಿ-ಅಯೋಧ್ಯೆ ರೈಲು ಸೇವೆ ಬಗ್ಗೆ ಬೇಡಿಕೆ ಇದೆ. ಈ ಯೋಜನೆ ಕುರಿತು ಪ್ರಸ್ತಾವನೆ ತೆಗೆದುಕೊಂಡಿದ್ದೇನೆ. ರೈಲು ಓಡಿಸುವ ಕುರಿತು ಪ್ರಸ್ತಾವನೆಯನ್ನು ಪರೀಶಿಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ" ಎಂದು ಸಚಿವರು ಭರವಸೆ ನೀಡಿದರು.
ಉತ್ತರ ಪ್ರದೇಶದ ಅಯೋಧ್ಯೆ ಮತ್ತು ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಂಜನಾದ್ರಿಗೂ ಐತಿಹಾಸಿಕ ನಂಟಿದೆ. ಅಂಜನಾದ್ರಿ ಹನುಮ ಹುಟ್ಟಿದ ಸ್ಥಳ ಎಂಬ ನಂಬಿಕೆ ಇದೆ. ಅಯೋಧ್ಯೆಯಲ್ಲಿ ರಾಮ ಮಂದಿರವಿದೆ.
ಅಂಜನಾದ್ರಿ ಮತ್ತು ಅಯೋಧ್ಯೆಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈ ಎರಡೂ ನಗರದ ನಡುವೆ ರೈಲು ಸೇವೆ ಆರಂಭವಾದರೆ ಭಕ್ತರಿಗೆ ಅನುಕೂಲವಾಗಲಿದೆ ಎಂಬುದು ಭಕ್ತರ ಬೇಡಿಕೆಯಾಗಿದೆ.
ಕೊಪ್ಪಳ ಸಂಸದರಾಗಿದ್ದ ಕರಡಿ ಸಂಗಣ್ಣ 2023ರಲ್ಲಿಯೇ ಅಂಜನಾದ್ರಿ ಮತ್ತು ಅಯೋಧ್ಯೆ ನಡುವೆ ನೇರ ರೈಲು ಬೇಕು ಎಂದು ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದರು. ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಇಲಾಖೆ ಈ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿತ್ತು.
ಅಂಜನಾದ್ರಿ ಮತ್ತು ಅಯೋಧ್ಯೆ ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳು. ರೈಲು ಸೇವೆ ಆರಂಭವಾದರೆ ಅಕ್ಕಪಕ್ಕದ ಜಿಲ್ಲೆಗಳ ಜನರಿಗೂ ಸಹ ಅನುಕೂಲವಾಗಲಿದೆ. ಹುಬ್ಬಳ್ಳಿ ಅಥವ ಗುಂತಕಲ್ ಮೂಲಕ ಈ ರೈಲು ಸಾಗುವಂತೆ ವೇಳಾಪಟ್ಟಿ ತಯಾರು ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಕರ್ನಾಟಕ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಹಲವು ವರ್ಷಗಳಿಂದಲೂ ಅಂಜನಾದ್ರಿ ಮತ್ತು ಅಯೋಧ್ಯೆಗೆ ರೈಲು ಬೇಕು ಎಂದು ಬೇಡಿಕೆ ಸಲ್ಲಿಸಲಾಗುತ್ತಿದೆ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿದ್ದು, ಕರ್ನಾಟಕದಿಂದಲೂ ಅನೇಕ ಭಕ್ತರು ಅಲ್ಲಿಗೆ ಭೇಟಿ ನೀಡುತ್ತಾರೆ.
ಸಚಿವ ವಿ. ಸೋಮಣ್ಣ ಮುಂದೆ ಕೊಪ್ಪಳ ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಬಾಗಲಕೋಟೆ-ಗಂಗಾವತಿ ಮತ್ತು ಗಂಗಾವತಿ-ದರೋಜಿ ರೈಲು ಮಾರ್ಗಗಳನ್ನು ಮಂಜೂರು ಮಾಡಿಕೊಡಬೇಕು. ಕೊಪ್ಪಳ ನಗರದ ಗಂಗಾವತಿ ರಸ್ತೆಯ ಮೆಡಿಕಲ್ ಕಾಲೇಜು ಹತ್ತಿರದ ಕಿಡಿದಾಳ ಗೇಟ್‌ನಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿದರೆ, ಜನರಿಗೆ ಅನುಕೂಲವಾಗುತ್ತದೆ. ಅಂಜನಾದ್ರಿ-ಅಯೋಧ್ಯೆಗೆ ವಂದೇ ಭಾರತ್ ರೈಲಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.












Click it and Unblock the Notifications