ಗಂಗಾವತಿ-ಕಾರಟಗಿ ರೈಲು; ಶೀಘ್ರದಲ್ಲೇ ಸಂಚಾರ ಆರಂಭ
ಕೊಪ್ಪಳ, ಮೇ 31 : ಗಂಗಾವತಿ ಮತ್ತು ಕಾರಟಗಿ ನಡುವಿನ ರೈಲು ಸಂಚಾರದ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ. 27 ಕಿ. ಮೀ. ಮಾರ್ಗದಲ್ಲಿ ನೈಋತ್ಯ ರೈಲ್ವೆ ಪ್ರಾಯೋಗಿಕ ಸಂಚಾರವನ್ನು ಮಾಡಿ ಹಳಿಗಳ ಪರಿಶೀಲನೆ ನಡೆಸಿದೆ.
ಈ ಯೋಜನೆ 2013ರಲ್ಲಿ ಮಂಜೂರಾದ ಗಿಣಿಗೇರಾ-ಮೆಹಬೂಬ್ ನಗರ ರೈಲು ಮಾರ್ಗದ ಭಾಗವಾಗಿದೆ. 2019ರಲ್ಲಿ ಕೊಪ್ಪಳ-ಗಂಗಾವತಿ ನಡುವಿನ ರೈಲು ಸಂಚಾರ ಆರಂಭವಾಗಿದೆ. ಇದನ್ನು ಕಾರಟಗಿ ತನಕ ವಿಸ್ತರಣೆ ಮಾಡಲಾಗಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಈ ಮಾರ್ಗ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಕಾರಟಗಿ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ನಡುವಿನ 18 ಕಿ. ಮೀ. ಕಾಮಗಾರಿ ಇನ್ನೂ ನಡೆಯುತ್ತಿರುವ ಕಾರಣ ತಡವಾಗಿದೆ.

ಸಿಂಧನೂರು ತಲುಪಲು ಇನ್ನೂ 62 ಕಿ. ಮೀ. ಮಾರ್ಗದ ನಿರ್ಮಾಣವಾಗಬೇಕಿದೆ. ಭೂಸ್ವಾಧೀನದ ಕಾರಣ ವಿಳಂಬವಾಗುತ್ತಿದೆ. ರೈಲ್ವೆ ಹಳಿ ಕಾಮಗಾರಿ ಮುಗಿದು ರೈಲು ಸಂಚಾರ ಆರಂಭವಾದರೆ ರಾಯಚೂರು ತನಕ ರೈಲು ತಲುಪಲಿದೆ.
ಗಂಗಾವತಿ ಮತ್ತು ಕಾರಟಗಿ ನಡುವಿನ 27 ಕಿ. ಮೀ. ಮಾರ್ಗದಲ್ಲಿ ನೈಋತ್ಯ ರೈಲ್ವೆ ಹಳಿಗಳ ತಪಾಸಣೆ, ವೇಗದ ಪರೀಕ್ಷೆಯನ್ನು ಮುಗಿಸಿದೆ. ರೈಲ್ವೆ ಇಲಾಖೆ ಅನುಮತಿ ಸಿಗುತ್ತಿದ್ದಂತೆ ರೈಲು ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಿಣಿಗೇರಾ-ಗಂಗಾವತಿ ನಡುವಿನ 40 ಕಿ. ಮೀ. ರೈಲು ಮಾರ್ಗ ನಿರ್ಮಾಣಕ್ಕೆ ಸುಮಾರು 20 ವರ್ಷ ತೆಗೆದುಕೊಳ್ಳಲಾಯಿತು. 1999ರಲ್ಲಿ ಪ್ರಧಾನಿಯಾಗಿದ್ದ ಎಚ್. ಡಿ. ದೇವೇಗೌಡರು ಮುನಿರಾಬಾದ್‌ನಲ್ಲಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು.
ಆದರೆ, ಮುನಿರಾಬಾದ್-ಗಂಗಾವತಿ ನಡುವೆ ತುಂಗಭದ್ರಾ ನದಿ, ಬೆಟ್ಟಗಳ ಸಾಲು ಬರುವ ಕಾರಣ ಯೋಜನೆಯನ್ನು ಗಿಣಿಗೇರಾ-ಗಂಗಾವತಿಗೆ ಬದಲಾವಣೆ ಮಾಡಲಾಯಿತು. ಈಗ ಗಂಗಾವತಿಯಿಂದ ಕಾರಟಗಿಗೆ ರೈಲು ಸಂಚಾರ ನಡೆಸಲಿದೆ.












Click it and Unblock the Notifications