SSLC Examination 2025: ಕೊಪ್ಪಳ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷೆ ಪರೀಕ್ಷೆಗೆ 600 ವಿದ್ಯಾರ್ಥಿಗಳು ಗೈರು
SSLC Examination 2025: ಇದೀಗ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿವೆ. ಇಂದು (ಮಾರ್ಚ್ 26) ಕೊಪ್ಪಳ ಜಿಲ್ಲೆಯ 73 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ದ್ವಿತೀಯ ಭಾಷೆಗೆ ಒಟ್ಟು 600 ವಿದ್ಯಾರ್ಥಿಗಳು ಗೈರಾಗಿರುವ ಘಟನೆ ನಡೆದಿದೆ.
ಯಾವ ತಾಲ್ಲೂಕಿನಲ್ಲಿ ಎಷ್ಟು ವಿದ್ಯಾರ್ಥಿಗಳು ಗೈರು?
* ಗಂಗಾವತಿ ಶೈಕ್ಷಣಿಕ ತಾಲ್ಲೂಕಿನಲ್ಲಿ 226
* ಕೊಪ್ಪಳ 145
* ಕುಷ್ಟಗಿ 79
* ಯಲಬುರ್ಗಾ ಶೈಕ್ಷಣಿಕ ತಾಲ್ಲೂಕಿನಲ್ಲಿ 150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ.

ಮೂವರ ಬಂಧನ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನಕಲಿ ಅಂಕಪಟ್ಟಿ ಮಾರುತ್ತಿದ್ದ ಮೋಸಗಾರರ ಜಾಲ ಸಿಸಿಬಿ ಬಲೆಗೆ ಬಿದ್ದಿದೆ. 10-15,000 ರೂಪಾಯಿ ಪಡೆದು ಈ ನಕಲಿ ಅಂಕಪಟ್ಟಿಗಳನ್ನು ಕೊಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ.
ಬನಶಂಕರಿ 3ನೇ ಹಂತದ ಶ್ರೀನಿವಾಸನಗರದ ಕೆ.ಜೆ.ಮೋನಿಷ್ (26), ಧಾರವಾಡದ ಪ್ರಶಾಂಶ್ ಗುಂಡುಮಿ (41), ಮತ್ತು ಗದಗ ಜಿಲ್ಲೆಯ ಲಕ್ಷ್ಮೀಶ್ವರ ಸಿಟಿಯ ಎಚ್. ರಾಜಶೇಖರ್ ಬಳ್ಳಾರಿ (41) ಬಂಧಿತರು. ಹಣ ಸಂಪಾದನೆ ದುರುದ್ದೇಶದಿಂದ ದೂರ ಶಿಕ್ಷಣ ಮೂಲಕ ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಅಂಕಪಟ್ಟಿ ನೀಡುತ್ತಿದ್ದ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.
2017ರಿಂದಲೂ ಈವರೆಗೆ 350ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು, ಪ್ರತಿ ವಿದ್ಯಾರ್ಥಿಯಿಂದ 10 ರಿಂದ 15 ಸಾವಿರ ರೂಪಾಯಿ ಪಡೆದು ಆರೋಪಿಗಳು ವಿತರಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.
ಕತ್ರಿಗುಪ್ಪೆ ಮುಖ್ಯರಸ್ತೆಯ ರಾಮ್‌ರಾವ್ ಲೇಔಟ್‌ನಲ್ಲಿ ಇರುವ ಅಕಾಡೆಮಿ ಮಾಲೀಕರನ್ನು ಭೇಟಿ ಮಾಡಿದ ದೂರುದಾರರು ತಮ್ಮ, ಅಣ್ಣನ ಮಗನನ್ನು ದೂರ ಶಿಕ್ಷಣದ ಮೂಲಕ ಪಿಯುಸಿಗೆ ದಾಖಲು ಮಾಡಿಸಿದ್ದರು. ಕೆಲವೇ ದಿನಗಳಲ್ಲಿ ಈತನಿಗೆ ಯಾವುದೇ ಪರೀಕ್ಷೆ ಬರೆಸದೇ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯ ಹೆಸರಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ಅಂಕಪಟ್ಟಿ ನೀಡಲಾಗಿತ್ತು.
ಅಂಕಪಟ್ಟಿಯನ್ನು ಪರಿಶೀಲನೆ ಮಾಡಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಸಿಸಿಬಿಯ ಆರ್ಥಿಕ ಅಪರಾಧ ದಳಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಬನಶಂಕರಿಯ ಅಕಾಡೆಮಿ ಮೇಲೆ ದಾಳಿ ನಡೆಸಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೂವರು ಆರೋಪಿಗಳ ಸುಳಿವು ಲಭ್ಯವಾಗಿದೆ.
ಈ ಬಗ್ಗೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು, ಅಲ್ಲಿಂದ ಆರೋಪಿಗಳ ಶ್ರೀನಗರದ ಕಚೇರಿ ಮೇಲೆ ದಾಳಿ ನಡೆಸಿದಾಗ 1 ಅಸಲಿ ಪಿಯುಸಿ ಅಂಕಪಟ್ಟಿ, ಅಸಲಿ ಲೀವಿಂಗ್ ಸರ್ಟಿಫಿಕೇಟ್, ಪ್ರಾವಿಷನಲ್ ಮಾರ್ಕ್ಸ್ ಕಾರ್ಡ್, ಹಾಲ್ ಟಿಕೆಟ್‌ಗಳು ಪತ್ತೆ ಆಗಿದ್ದವು.
ಬಳಿಕ ಪೊಲೀಸರು ಆರೋಪಿ ಪ್ರಶಾಂತ್‌ನನ್ನು ಶ್ರೀನಗರದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡಿದ್ದಾರೆ. ಈಗ ಕೊಟ್ಟ ಸುಳುವಿನ ಮೇರೆಗೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳ ಮೊಬೈಲ್ ಪರಿಶೀಲನೆ ನಡೆಸಿದಾಗ 350ಕ್ಕೂ ಹೆಚ್ಚು ನಕಲಿ ಅಂಕಪಟ್ಟಿ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.












Click it and Unblock the Notifications