ಅತೃಪ್ತರು ಸಿದ್ದರಾಮಯ್ಯಗೆ ಕರೆ ಮಾಡಿದ್ದು ಸತ್ಯ: ಶಿವರಾಜ್ ತಂಗಡಗಿ
ಬೆಂಗಳೂರು, ಜುಲೈ 29: ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಅನರ್ಹಗೊಳಿಸದಂತೆ ಕೇಳಿದರು ಎಂಬ ಸುದ್ದಿ ಎರಡು ದಿನದ ಹಿಂದೆ ಹರಡಿತ್ತು, ಸಿದ್ದರಾಮಯ್ಯ ಅವರೇ ಸ್ವತಃ, 'ಅತೃಪ್ತ ಶಾಸಕರಿಬ್ಬರು ನನಗೆ ಕರೆ ಮಾಡಿದ್ದರು' ಎಂದು ಹೇಳಿದ್ದರು.
ಆದರೆ ನಾವ್ಯಾರೂ ಸಿದ್ದರಾಮಯ್ಯಗೆ ಕರೆ ಮಾಡಿರಲಿಲ್ಲವೆಂದು ಅತೃಪ್ತ ಶಾಸಕರು ಮಾಧ್ಯಮಗಳಿಗೆ ಹೇಳಿದ್ದರಲ್ಲದೆ, ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆಂದು ವಾದಿಸಿದ್ದರು.
ಆದರೆ ಈಗ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಸಿದ್ದರಾಮಯ್ಯ ಪರ ವಾದಕ್ಕೆ ಇಳಿದಿದ್ದು, 'ಅತೃಪ್ತರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದು, ಸತ್ಯ, ನಾನಿದ್ದಾಗಲೆ ಶಾಸಕರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು' ಎಂದಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಕೆಲವು ಅತೃಪ್ತರು, ಅನರ್ಹ ಮಾಡಬೇಡಿ, ದೂರು ವಾಪಸ್ ಪಡೆಯಿರಿ, ನಾವು ವಾಪಸ್ ಬರುತ್ತೇವೆ ಎಂದು ಕೇಳಿಕೊಂಡರು ಎಂದು ಗುಟ್ಟು ಹೊರಗೆಡವಿದ್ದಾರೆ.
ಅತೃಪ್ತ ಶಾಸಕರು ತಮ್ಮ ಮಾನ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಅವರ ಹೆಸರು ಹೇಳುತ್ತಿದ್ದಾರೆ. ಅತೃಪ್ತ ಶಾಸಕರ ಚಟುವಟಿಕೆಯಿಂದ ಸಿದ್ದರಾಮಯ್ಯ ಅವರು ಮಾನಸಿಕವಾಗಿ ನೊಂದಿದ್ದಾರೆ. ಸಿದ್ದರಾಮಯ್ಯ ಅವರು ಯಾರನ್ನೂ ಮುಂಬೈಗೆ ಕಳುಹಿಸಿಲ್ಲ ಎಂದು ತಂಗಡಗಿ ಹೇಳಿದ್ದಾರೆ.
ಮುಂದುವರೆದ ಮಾತನಾಡಿರುವ ತಂಗಡಗಿ, 'ಅತೃಪ್ತ ಶಾಸಕರು ಈಗ ಅನರ್ಹಗೊಂಡು ಬೀದಿಗೆ ಬಂದು ನಿಲ್ಲುವಂತ ಸ್ಥಿತಿಗೆ ಬಂದಿದ್ದಾರೆ. ಅತೃಪ್ತ ಶಾಸಕರನ್ನು ಬೀದಿಗೆ ನಿಲ್ಲಿಸಿ ಬಿಜೆಪಿ ಸೇಫ್ ಆಗಿದೆ' ಎಂದಿದ್ದಾರೆ.












Click it and Unblock the Notifications