ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ; ಅಕ್ಕನನ್ನು ಕೊಂದ ತಮ್ಮ
ಕೊಪ್ಪಳ, ಅಕ್ಟೋಬರ್ 19: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಅ.17ರಂದು ನಡೆದಿದ್ದ ತ್ರಿವೇಣಿ ಎಂಬ ಮಹಿಳೆಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆ ಮಹಿಳೆಯ ತಮ್ಮನನ್ನು ಬಂಧಿಸಿದ್ದಾರೆ. ಇದು ಮರ್ಯಾದಾ ಹತ್ಯೆ ಎಂದು ತಿಳಿದುಬಂದಿದೆ.
ಅ.17ರಂದು ಇಲ್ಲಿನ ಬಸವೇಶ್ವರ ನಗರದಲ್ಲಿ ವಿನೋದ್, ತ್ರಿವೇಣಿ ದಂಪತಿ ಮೇಲೆ ಮೂವರು ಹಲ್ಲೆ ನಡೆಸಿದ್ದರು. ಅದರಲ್ಲಿ ತ್ರಿವೇಣಿ ಸಾವನ್ನಪ್ಪಿದ್ದರು. ಅಂತರ ಜಾತಿಯ ವಿವಾಹವಾದ ಕಾರಣ ತ್ರಿವೇಣಿ ಸಹೋದರ ಅವಿನಾಶ್ ಈ ಹತ್ಯೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ವಿನೋದ್ (31) ಹಾಗೂ ತ್ರಿವೇಣಿ (34) ಏಳು ತಿಂಗಳ ಹಿಂದೆ ಮದುವೆಯಾಗಿದ್ದರು. ತ್ರಿವೇಣಿ ಮತ್ತು ವಿನೋದ ಮುಧೋಳದ ಖಾಸಗಿ ಬ್ಯಾಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿಸಿದ್ದರು. ಆದರೆ ಈ ಮದುವೆಗೆ ತ್ರಿವೇಣಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಕಳೆದ ಮಾರ್ಚ್ನಲ್ಲಿ ಗಂಗಾವತಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟ್ರಾರ್ ಮದುವೆಯಾದ ಇವರು ತಮ್ಮನೆರೆ ಮನೆಯವರ ಸಹಕಾರದೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಂಡಿದ್ದರು. ತಮ್ಮ ವೈವಾಹಿಕ ಜೀವನವನ್ನೂ ಆರಂಭಿಸಿದ್ದರು.

ಈ ಸಂಗತಿಯಿಂದ ಕೋಪಗೊಂಡಿದ್ದ ತ್ರಿವೇಣಿ ಸಹೋದರ ಅವಿನಾಶ್ (27) ಇಬ್ಬರ ಜೊತೆ ಸೇರಿ ಅಕ್ಕನ ಕೊಲೆಗೆ ಸಂಚು ರೂಪಿಸಿದ್ದಾನೆ. ಅಕ್ಟೋಬರ್ 17ರ ರಾತ್ರಿ 7ಕ್ಕೆ ಬಸವೇಶ್ವರ ನಗರದಲ್ಲಿನ ಅವರ ಮನೆ ಸಮೀಪದಲ್ಲೇ ಇಬ್ಬರ ಮೇಲೂ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತ್ರಿವೇಣಿ ಸ್ಥಳದಲ್ಲೇ ಮೃತಪಟ್ಟಿದ್ದು, ವಿನೋದ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು
Recommended Video
ಕೊಪ್ಪಳ ಎಸ್ಪಿ ಟಿ.ಶ್ರೀಧರ ನೇತೃತ್ವದ ಪೊಲೀಸ್ ತಂಡ ಈ ಹತ್ಯೆಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಕಾಕನಕಟ್ಟೆ ಗ್ರಾಮದ ಅವಿನಾಶ್ ನನ್ನು ಬಂಧಿಸಿದೆ. ಕೊಲೆ ಮಾಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಮುಂದುವರೆದಿದೆ.












Click it and Unblock the Notifications