ಗಂಗಾವತಿ ಚುನಾವಣೆ ಫಲಿತಾಂಶ 2023: ಗಾಲಿ ಜನಾರ್ದನ ರೆಡ್ಡಿಗೆ ಗೆಲುವು
ಗಂಗಾವತಿ, ಮೇ, 13: ರಾಜ್ಯ ವಿಧಾನಸಭೆ ಚುನಾಣೆಯ ಮತ ಎಣಿಕೆ ನಡೆದಿದ್ದು, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗಾಲಿ, ಜನಾರ್ದನ ರೆಡ್ಡಿ ಅವರು ಗೆಲುವು ಸಾಧಿಸಿದ್ದಾರೆ. ಇನ್ನು ಇವರಿಗೆ ಬಿಗ್ ಫೈಟ್ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಸೋಲುಂಡಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ ವಿರುದ್ಧ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್‌ನಿಂದ ಚನ್ನಕೇಶವ್ ಹಿರಿಯಾಳ್ ಅಖಾಡಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ 2,02,206 ಮತದಾರರಿದ್ದು, ಈ ಪೈಕಿ 1,00,295 ಪುರುಷ, 1,01,899 ಜನ ಮಹಿಳಾ ಮತದಾರರು, 12 ಜನ ಇತರ ಮತದಾರರಿದ್ದಾರೆ. ಅಲ್ಲದೆ ಇಲ್ಲಿ ಈ ಬಾರಿ 77.61% ಮತದಾನ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಈಗಾಗಲೇ ಭರ್ಜರಿ ತಯಾರಿಗಳು ನಡೆಯುತ್ತಿವೆ. ಇದೇ ರೀತಿ ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಗಂಗಾವತಿ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದರು. ಗಂಗಾವತಿ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಗಂಗಾವತಿಯ ವಿಶೇಷತೆ ಏನು? ಗಂಗಾವತಿ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಈ ತಾಲೂಕು ಭತ್ತದ ಬೆಳೆಗೆ ಪ್ರಸಿದ್ಧಿಯನ್ನು ಪಡೆದಿದ್ದು, ಇದನ್ನು 'ಭತ್ತದ ಕಣಜ' ಅಂತಲೂ ಕರೆಯುತ್ತಾರೆ. ಇದು ಜಿಲ್ಲೆಯ ಅತ್ಯಂತ ದೊಡ್ಡ ವಾಣಿಜ್ಯ ನಗರವಾಗಿದ್ದು, ಅಕ್ಕಿ ಇಲ್ಲಿನ ಪ್ರಮುಖ ಬೆಳೆಯಾಗಿದೆ. ತಾಲೂಕು ಸಕ್ಕರೆ ಕಾರ್ಖನೆಗಳಿಗೂ ಹೆಸರುವಾಸಿ ಆಗಿದೆ. ಗಂಗಾವತಿಯ ಬಳಿ ಐತಿಹಾಸಿಕ ಮಹತ್ವವುಳ್ಳ ಪ್ರಸಿದ್ಧ ಸ್ಥಳಗಳಿವೆ.
ಕನಕಗಿರಿಯ ವೆಂಕಟಛಲಪತಿ ದೇವಾಲಯ, ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗುಂದಿ ಇದೇ ತಾಲೂಕಿನ ವ್ಯಾಪ್ತಿಗೆ ಬರುತ್ತದೆ. ರಾಘವೇಂದ್ರ ದೇವರ ನವ ಬೃಂದಾವನ, ಹೇಮಗುಡ್ಡ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಪಂಪಾಪತಿ, ಮುದ್ದಾನೇಶ್ವರಿ, ನೀಲಕಂಠೇಶ್ವರ ದೇವಸ್ಥಾನ ನಗರದ ವ್ಯಾಪ್ತಿಯೊಳಗೆ ಬರುತ್ತದೆ.
ಇಲ್ಲಿ 2018ರಲ್ಲಿ ಬಿಜೆಪಿ ಪಕ್ಷದ ಪರಣ್ಣ ಮುನವಳ್ಳಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ ಅವರು 7,973 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅಲ್ಲದೆ ಜಿಲ್ಲೆಯ ಗಂಗಾವತಿಯಲ್ಲಿ "ಕೈ" ಟಿಕೆಟ್ ಹಂಚಿಕೆಯೇ ಒಂದು ದೊಡ್ಡ ಸವಾಲಾಗಿತ್ತು. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮತ್ತು ಎಚ್.ಆರ್. ಶ್ರೀನಾಥ್‌ರ ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ ಕಾಂಗ್ರೆಸ್ ಕೊನೆಗೆ ಇಕ್ಬಾಲ್ ಅನ್ಸಾರಿಗೆ ಗಾಳ ಗಾಕಿತ್ತು.
2004ರಿಂದ 2013ರ ವರೆಗಿನ ಸಮಯದಲ್ಲಿ ಇಕ್ಬಾಲ್ ಅನ್ಸಾರಿ ಮೂರು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಎರಡು ಬಾರಿ ಜಯಭೇರಿ ಬಾರಿದ್ದರು. ನಂತರ 2018ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಸೋಲನುಭವಿಸಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆ ಅನ್ಸಾರಿ ಗುರುತಿಸಿಕೊಂಡಿದ್ದರೆ, ಡಿ.ಕೆ.ಶಿವಕುಮಾರ್ ಜೊತೆ ಶ್ರೀನಾಥ ಮತ್ತು ಮಲ್ಲಿಕಾರ್ಜುನ್ ನಾಗಪ್ಪ ಗುರುತಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಹಿನ್ನೆಲೆ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕುವಂತೆ ಆಗಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಆದರೆ ಕೊನೆಗು ಅನ್ಸಾರಿ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಮತ್ತೊಂದೆಡೆ ಕಾಂಗ್ರೆಸ್‌ನ ಒಡಕಿನ ಲಾಭ ಗಿಟ್ಟಿಸಿಕೊಳ್ಳಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಭಾರಿ ಕಸರತ್ತು ನಡೆಸಿದ್ದರು.
ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೆಡ್ಡಿ ಬಿಜೆಪಿ ಹಾಗೂ ಕಾಂಗ್ರೆಸ್ ಮತಗಳ ಲಾಭವನ್ನು ಪಡೆಯಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಇತ್ತೀಚೆಗಷ್ಟೇ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗಂಗಾವತಿಗೆ ಬಂದಿದ್ದ ನಳಿನ್ ಕುಮಾರ್ ಕಟಿಲ್ ಕೂಡ ಹನುಮ ಉದಯಿಸಿದ ನಾಡು ಅಂಜನಾದ್ರಿ ಕ್ಷೇತ್ರದಲ್ಲಿ ಹಿಂದೂ ಶಾಸಕರೇ ಅಧಿಕಾರಲ್ಲಿ ಇರಬೇಕು ಎಂದು ಹೇಳಿದ್ದರು.
ಹೀಗೆ ಸಂಚಲನ ಸೃಷ್ಟಿಸಿದ್ದ ರೆಡ್ಡಿ ಸ್ಪರ್ಧೆ ಜನಾರ್ದನ ರೆಡ್ಡಿಯವರು, ಈ ಬಾರಿ ಗಂಗಾವತಿಯಿಂದ ಸ್ಪರ್ಧೆಗಿಳಿದು ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ರೆಡ್ಡಿ ಆಗಮಿಸುತ್ತಿದ್ದಂತೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿದ್ದರು.
ಇನ್ನು ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ ಹಾಗೂ ಕುರುಬ ಜನಾಂಗದ ಮತಗಳು ಅಧಿಕ ಸಂಖ್ಯೆಯಲ್ಲಿವೆ. ಮುಸ್ಲಿಂ ಮತಗಳು ನಗರ ಪ್ರದೇಶದಲ್ಲಿ ಇದ್ದರೆ, ಗ್ರಾಮೀಣ ಭಾಗದಲ್ಲಿ ಲಿಂಗಾಯತ ಹಾಗೂ ಕುರುಬ ಮತಗಳು ಅಧಿಕವಾಗಿವೆ. ಗಂಗಾವತಿಯಲ್ಲಿ ದೇವಸ್ಥಾನ ಹಾಗೂ ಮಸೀದಿಗಳಿಗೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ, ಬಿಜೆಪಿ ಪಕ್ಷದಲ್ಲಿ ಅಸಮಾಧಾನಗೊಂಡಿರುವ ಕಾರ್ಯಕರ್ತರು ಹಾಗೂ ಇಕ್ಬಾಲ್ ಅನ್ಸಾರಿಯವರ ಬೆಂಬಲಿಗರನ್ನು ಸಂಪರ್ಕ ಮಾಡಿದ್ದರು ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು.
ಈ ಮೂಲಕ ಗಂಗಾವತಿಯಲ್ಲಿ ಪರಣ್ಣ ಹಾಗೂ ಇಕ್ಬಾಲ್ ಅನ್ಸಾರಿ ಅವರಿಗೆ ಬಿಸಿಮುಟ್ಟಿಸಲು ರೆಡ್ಡಿ ನಿರ್ಧಾರ ಮಾಡಿದ್ದರು. ಈ ನಡುವೆಯೇ ಬಳ್ಳಾರಿಯ ರೀತಿಯಲ್ಲಿ ಗಂಗಾವತಿಯನ್ನು ಸಹ ಐದು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಆಗಿರುವ ಆನೆಗೊಂದಿ ಹಾಗೂ ಹನುಮನ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳುವ ಮೂಲಕ ಮತಬೇಟೆಯನ್ನು ಆರಂಭಿದ್ದರು.












Click it and Unblock the Notifications