ದೀಪಾವಳಿ; ಹಸಿರು ಪಟಾಕಿ ಸಿಡಿಸಿ, ಪರಿಸರ ರಕ್ಷಣೆ ಸಹಕರಿಸಿ
ಕೊಪ್ಪಳ, ನವೆಂಬರ್ 10; ದೀಪಾವಳಿ ಹಬ್ಬ ಹತ್ತಿರವಾಗುತ್ತಿದೆ. ಪಟಾಕಿ ಸಿಡಿಸುವುದು, ಮಾರಾಟ ಮತ್ತು ದಾಸ್ತಾನು ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಬ್ಬದ ಸಮಯದಲ್ಲಿ ಹಸಿರು ಪಟಾಕಿ ಸಿಡಿಸಿ, ಪರಿಸರ ರಕ್ಷಣೆ ಸಹಕರಿಸಿ ಎಂದು ಕರೆ ನೀಡಲಾಗಿದೆ.
ಕೊಪ್ಪಳ ಜಿಲ್ಲಾ ಪರಿಸರ ಅಧಿಕಾರಿ ಎಸ್. ಸಿ. ಸುರೇಶ್ ಈ ಕುರಿತು ಮಾತನಾಡಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಕೆಯೊಂದಿಗೆ ಆಚರಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ ಪಟಾಕಿಗಳ ಮಾರಾಟ ಮತ್ತು ನಿಯಂತ್ರಿಸುವ ಕುರಿತು ಈಗಾಗಲೇ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಹಸಿರು ಪಟಾಕಿ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಇದ್ದು ಕ್ಯೂಆರ್ ಕೋಡ್ ಇರುವ ಪಟಾಕಿಗಳನ್ನೇ ಉಪಯೋಗಿಸಬೇಕು ಎಂದು ಹೇಳಿದ್ದಾರೆ.
ಪಟಾಕಿ ಮಾರಾಟ ಮಾರ್ಗಸೂಚಿ; ಸುಪ್ರೀಂಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳ ಹೊರತು ಪಡಿಸಿ ಉಳಿದ ಪಟಾಕಿಗಳನ್ನು ಬಳಕೆ ಮಾಡಬಾರದು. ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಕರೆ ಕೊಟ್ಟಿದ್ದಾರೆ.
ಪಟಾಕಿ ಬಳಸುವಾಗ ಪ್ರಾಣಿ-ಪಕ್ಷಿಗಳು, ಮಕ್ಕಳು ಮತ್ತು ವೃದ್ದರಿಗೆ ತೊಂದರೆಯಾಗದಂತೆ ಬಳಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸುತ್ತಮುತ್ತ ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಿಡಿಮದ್ದುಗಳನ್ನು ಸ್ಪೋಟಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್, ವೃತ್ತ ನಿರೀಕ್ಷಕರು, ತಮ್ಮ ವ್ಯಾಪ್ತಿಯಲ್ಲಿ ಮಾರಾಟಗಾರರ ಗೋದಾಮುಗಳನ್ನು ಪರಿವೀಕ್ಷಿಸಿದ್ದು, ಹಸಿರು ಪಟಾಕಿಗಳಲ್ಲದೆ ಬೇರೆ ಯಾವುದೇ ನಿಷೇಧಿತ ಪಟಾಕಿಗಳನ್ನು ಶೇಖರಿಸಿದ್ದಲ್ಲಿ ಮುಟ್ಟುಗೋಲು ಹಾಕಿಕೊಂಡು ಸಂಬಂಧಿತ ವ್ಯಕ್ತಿಗಳ ಮೇಲೆ ಕಾನೂಕು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ತಾತ್ಕಾಲಿಕವಾಗಿ ಪಟಾಕಿ ಮಳಿಗೆಗಳನ್ನು ತೆರೆಯುವ ಮಾಲೀಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅನುಮತಿ ಪತ್ರದಲ್ಲಿ ನೀಡಿದ ಷರತ್ತುಗಳನ್ನು ತಪ್ಪದೇ ಪಾಲಿಸಬೇಕು. ಸಾರ್ವಜನಿಕರಿಗೆ ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲು ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸುವ ಕುರಿತು ಸಾರ್ವಜನಿಕ ಸ್ಥಳಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕರ ಪತ್ರ ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ಪಟಾಕಿಗಳನ್ನು ಸಾಗಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು.
ಎಲ್ಲಾ ಗಡಿ ಭಾಗಗಳ ಚೆಕ್ ಪೋಸ್ಟ್‌ಗಳಲ್ಲಿ ವಾಣಿಜ್ಯ ಅಧಿಕಾರಿಗಳು ತಪಾಸಣೆ ಮಾಡಿ ಮುಟ್ಟುಗೋಲು ಹಾಕಿಕೊಳ್ಳಬೇಕು. ದೀಪಾವಳಿ ಸಮಯದಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯ ವಿಲೇವಾರಿ ಕುರಿತು ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸಾಂಪ್ರದಾಯಿಕ ಪಟಾಕಿಗಳಿಗಿಂತ ಹಸಿರು ಪಟಾಕಿಗಳು ಕಡಿಮೆ ಗಾತ್ರದಲ್ಲಿದ್ದು, ಇವುಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕವು ಶೇ.30 ರಿಂದ 40 ರಷ್ಟು ಕಡಿಮೆ ಪ್ರಮಾಣದಲ್ಲಿರುತ್ತದೆ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಹೊರಸೂಸುವ ರಾಸಾಯನಿಕ ಹೊಗೆ ಧೂಳನ್ನು ಕಡಿಮೆ ಮಾಡುವ ವಾತಾವರಣ ಪರಿವೇಷ್ಠಕ ಗಾಳಿಯಲ್ಲಿ ತೇಲಾಡುವ ಧೂಳಿನ ಕಣಗಳು So2 ಮತ್ತು No2 ಅಂಶಗಳ ಪ್ರಮಾಣವು ಶೇ.30 ರಷ್ಟು ಕಡಿಮೆಯಾಗಲಿದೆ ಎಂದು ವಿವರಣೆ ನೀಡಲಾಗಿದೆ.
ನಗರ ಮತ್ತು ಪಟ್ಟಣದ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪಟಾಕಿ ಮತ್ತು ಸಿಡಿಮದ್ದುಗಳನ್ನು, ಬಾಣ ಬಿರುಸುಗಳನ್ನು ಉಪಯೋಗಿಸುವುದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಪೋಟದಿಂದ ಅಪಾಯಗಳು ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪಟಾಕಿ ಹಾಗೂ ಸಿಡಿಮದ್ದುಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಒಟ್ಟಾಗಿ ಸೇರಿ ಸಿಡಿಸಲು ವಿನಂತಿಸಲಾಗಿದೆ.












Click it and Unblock the Notifications