ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಕರೆ
ಕೊಪ್ಪಳ, ಸೆಪ್ಟೆಂಬರ್ 03; ಗೌರಿ ಗಣೇಶ ಹಬ್ಬಕ್ಕೆ ತಯಾರಿ ಜೋರಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜನರಿಗೆ ಹಲವಾರು ಕರೆಗಳನ್ನು ನೀಡುತ್ತಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳ ಮಾರಾಟ, ನದಿಗಳಲ್ಲಿ ವಿಸರ್ಜನೆ ಕುರಿತು ಈಗಾಗಲೇ ಹಲವು ಸೂಚನೆಗಳನ್ನು ನೀಡಿದೆ. ಜನರು ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪರಿಸರ ಸ್ನೇಹಿಯಾಗಿ ಗೌರಿ-ಗಣೇಶ ಹಬ್ಬ 2023 ಆಚರಿಸುವಂತೆ ಕರೆ ಕೊಟ್ಟಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಇದರಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ದುಷ್ಟರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ ಎಂದು ಹೇಳಿದ್ದಾರೆ.
ಜಲ ಸಂಪನ್ಮೂಲ ರಕ್ಷಣೆಗೆ ಸಹಕರಿಸಿ; ಜಲಮೂಲಗಳು ಕಲುಷಿತಗೊಂಡರೆ ಸಾರ್ವಜನಿಕರ ಆರೋಗ್ಯಕ್ಕೂ ಧಕ್ಕೆ ಉಂಟಾಗುತ್ತದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ 2016ರ ಜುಲೈ 20ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ತಯಾರಿಸಬಾರದೆಂದು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33 (ಎ) ಅನ್ವಯ ರಾಜ್ಯದ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಐಪಿಸಿ ಸೆಕ್ಷನ್ 1860ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಅನುಸರಿಸಬೇಕಾದ ಕ್ರಮಗಳು
* ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣರಹಿತ ಮಣ್ಣಿನ ಅಥವಾ ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಗೌರಿ-ಗಣೇಶ ಮೂರ್ತಿಗಳನ್ನು ನಗರಸಭೆ, ಪುರಸಭೆ ವತಿಯಿಂದ ನಿಗದಿಪಡಿಸಿರುವ ಸ್ಥಳಗಳಲ್ಲಿ ಅಥವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನದಲ್ಲಿಯೇ ವಿಸರ್ಜಿಸುವುದು.
* ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿ ಕಸ (ಹೂ, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ. ಕಸಗಳನ್ನು ನಗರಸಭೆ, ಪುರಸಭೆಯ ಕಸ ಸಂಗ್ರಹಣ ವಾಹನಕ್ಕೆ ನೀಡಬೇಕು.
* ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವದ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ.












Click it and Unblock the Notifications