ಮನೆಯಲ್ಲೇ ಕೊಪ್ಪಳದಲ್ಲಿ ಕೋವಿಡ್ ಗೆದ್ದ 105ರ ವೃದ್ಧೆ
ಕೊಪ್ಪಳ, ಸೆಪ್ಟೆಂಬರ್ 14: ಕೋವಿಡ್ ಸೋಂಕಿಗೆ ತುತ್ತಾಗಿದ್ದ 105 ವರ್ಷದ ವೃದ್ಧೆಯೊಬ್ಬರು ಸಂಪೂರ್ಣ ಗುಣಮುಖರಾಗಿದ್ದಾರೆ. ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಕಮಲಮ್ಮ ಲಿಂಗನಗೌಡ ಹಿರೇಗೌಡರ್ ಎಂಬ 150 ವರ್ಷದ ವೃದ್ಧೆ ಕೋವಿಡ್ ಗೆದ್ದಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ಗ್ರಾಮದ ನಿವಾಸಿಯಾದ ವೃದ್ಧೆಗೆ ಕಳೆದ ವಾರ ಕೋವಿಡ್ ಸೋಂಕು ತಗುಲಿತ್ತು.
ಸೋಂಕಿತ ಯಾವುದೇ ಲಕ್ಷಣಗಳು ವೃದ್ಧೆಗೆ ಕಂಡುಬಂದಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವೃದ್ಧೆ ನಿರಾಕರಿಸಿದ್ದರು. ಬಳಿಕ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.

ಸ್ವತಃ ವೈದ್ಯರಾಗಿರುವ ಕಮಲಮ್ಮ ಮೊಮ್ಮಗ ಶ್ರೀನಿವಾಸ ಹ್ಯಾಟಿ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ವೃದ್ಧೆ ಈಗ ಕೋವಿಡ್‌ನಿಂದ ಗುಣಮುಖರಾಗಿದ್ದು, ವರದಿ ನೆಗೆಟೀವ್ ಬಂದಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ ಹ್ಯಾಟಿ ಅವರು, "ಅಜ್ಜಿಗೆ ಯಾವುದೇ ಆರೋಗ್ಯದ ತೊಂದರೆ ಇರಲಿಲ್ಲ. ಸಾಮಾನ್ಯ ಚಿಕಿತ್ಸೆ ನೀಡಲಾಗಿತ್ತು. ಅವರು ಸಂಪೂರ್ಣ ಗುಣಮುಖರಾಗಿದ್ದಾರೆ" ಎಂದು ಹೇಳಿದ್ದಾರೆ.
ಭಾನುವಾರ ಕೊಪ್ಪಳದಲ್ಲಿ 259 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 9061. ಜಿಲ್ಲೆಯಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1817.












Click it and Unblock the Notifications