ಸಿಎಂ ಮಮತಾಗೆ ಪರೀಕ್ಷೆ: ಇಂದು ಭವಾನಿಪುರ ಕ್ಷೇತ್ರದಲ್ಲಿ ಉಪ ಕದನ
ಕೋಲ್ಕತ್ತಾ, ಸೆಪ್ಟೆಂಬರ್ 30: ತೀವ್ರ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಣದಲ್ಲಿರುವ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಇಂದು ಶುರುವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಮಮತಾ, ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರು. ಈ ಹಿನ್ನೆಲೆಯಲ್ಲಿ ಅವರು ಇದೀಗ ಉಪ ಚುನಾವಣೆ ಮೂಲಕ ವಿಧಾನಸಭೆ ಪ್ರವೇಶ ಬಯಸಿದ್ದಾರೆ.
ಇಲ್ಲಿ ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ , ಸಿಪಿಎಂನಿಂದ ಶ್ರೀಬಿಜ್ ಬಿಸ್ವಾಸ್ ಸ್ಪರ್ಧಿಸಿದ್ದಾರೆ. ಪ್ರಚಾರದ ವೇಳೆ ಇಲ್ಲಿ ಭಾರಿ ಹಿಂಸಾಚಾರದ ಕಾರಣ ಗುರುವಾರದ ಮತದಾನಕ್ಕೆ ಬಂದೋಬಸ್ತ್ ಮಾಡಲಾಗಿದೆ.

ನಿಗದಿತ ವೇಳಾಪಟ್ಟಿಯಂತೆಯೇ ಭವಾನಿಪುರ ಉಪ ಚುನಾವಣೆ ನಡೆಯಲಿದೆ ಎಂದು ಹೇಳಿರುವ ಕೋಲ್ಕತಾ ಹೈಕೋರ್ಟ್ ಈ ಸಂಬಂಧ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಲಾಗಿತ್ತು.
ಈ ಸಂಬಂಧ ದಾಖಲಾಗಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಕೋಲ್ಕತಾ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಆರ್ ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸೆಪ್ಟೆಂಬರ್ 30 ರಂದು ನಿಗದಿಯಂತೆ ಚುನಾವಣೆ ನಡೆಯಲಿದೆ ಎಂದು ಆದೇಶಿಸಿತ್ತು.
ಅಂತೆಯೇ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಭವಾನಿಪುರದಲ್ಲಿ ಉಪಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು ಅಂತಹ ಪತ್ರ ಬರೆದಿರುವುದು ಸೂಕ್ತವಲ್ಲ ಎಂದು ಪೀಠ ಹೇಳಿತ್ತು.
ಇದರಲ್ಲಿ ಉಪಚುನಾವಣೆ ಕುರಿತು ಬಳಸಿದ ಭಾಷೆಯನ್ನು ಪ್ರಶ್ನಿಸಲಾಯಿತು. ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಭವಾನಿಪುರಕ್ಕೆ ಉಪ ಚುನಾವಣೆ ನಡೆಯದಿದ್ದರೆ "ಸಾಂವಿಧಾನಿಕ ಬಿಕ್ಕಟ್ಟು" ಉಂಟಾಗುತ್ತದೆ ಎಂದು ಹೇಳಿದ್ದರು. ಇದೇ ಪದಕ್ಕೆ ನ್ಯಾಯಾಲಯ ಅಕ್ಷೇಪ ವ್ಯಕ್ತಪಡಿಸಿತ್ತು.
ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. 2014ರಲ್ಲಿ ಬಿಜೆಪಿ ಸೇರಿರುವ ಪ್ರಿಯಾಂಕಾ ಅವರು, ಪಕ್ಷದ ಸಂಸದ ಬಾಬುಲ್ ಸುಪ್ರಿಯೊ ಅವರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಕಳೆದ ವರ್ಷವಷ್ಟೇ ಅವರನ್ನು ಬಿಜೆಪಿ ಮಹಿಳಾ ಮೋರ್ಚಾದ ಪಶ್ಚಿಮ ಬಂಗಾಳ ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಅಲ್ಪಮತಗಳ ಅಂತರದಿಂದ ಸೋತಿದ್ದ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಗತ್ಯವಾಗಿದೆ. ಅಕ್ಟೋಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
ವಿವಿಧ ಕಾರಣಗಳಿಂದ ತೆರವಾಗಿರುವ ರಾಜ್ಯಸಭೆಯ ಏಳು ಸ್ಥಾನಗಳಿಗೆ ಅ.4ರಂದು ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಗುರುವಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ತಮಿಳುನಾಡಿನಲ್ಲಿಎರಡು ಹಾಗೂ ಪಶ್ಚಿಮ ಬಂಗಾಳ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿಗಳ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿಥಾವರ್‌ಚಂದ್ ಗೆಹ್ಲೋಟ್ ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶದ ಸ್ಥಾನ ತೆರವಾಗಿದೆ. ಅಸ್ಸಾಂನಲ್ಲಿಬಿಜೆಪಿಯ ಕೇಂದ್ರ ಸಚಿವ ಸರ್ಬಾನಂದ ಸೊನೊವಾಲ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.












Click it and Unblock the Notifications