ಪಶ್ಚಿಮ ಬಂಗಾಳ ಬಿಜೆಪಿ ಶಾಸಕನ ಸಾವು; ಸಿಬಿಐ ತನಿಖೆಗೆ ಒತ್ತಾಯ
ಕೋಲ್ಕತ್ತಾ, ಜುಲೈ 14 : ಹೆಮ್ಟಾಬಾದ್ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ದೇಬೇಂದ್ರನಾಥ ರಾಯ್ ಸಾವಿನ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಒತ್ತಾಯಿಸಿದೆ. ಸೋಮವಾರ ಶಾಸಕರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
Recommended Video
ಮಂಗಳವಾರ ಪಶ್ಚಿಮ ಬಂಗಾಳ ಬಿಜೆಪಿ ನಾಯಕರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿತು. ಶಾಸಕ ದೇಬೇಂದ್ರನಾಥ ರಾಯ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅಮಿತ್ ಶಾಗೆ ಮನವಿ ಸಲ್ಲಿಸಿತು.
ಈ ಪ್ರಕರಣದಲ್ಲಿ ರಾಜ್ಯದ ಪೊಲೀಸರ ತನಿಖೆಯನ್ನು ನಂಬಲು ಸಾಧ್ಯವಿಲ್ಲ. ಇದುವರೆಗೂ ರಾಜ್ಯದಲ್ಲಿ ನಡೆದ ರಾಜಕೀಯ ಪ್ರೇರಿತ ಹತ್ಯೆಗಳ ಕುರಿತು ಪೊಲೀಸರು ಸರಿಯಾದ ತನಿಖೆಯನ್ನು ನಡೆಸಿಲ್ಲ ಎಂದು ಬಿಜೆಪಿ ನಾಯಕರ ನಿಯೋಗ ಅಮಿತ್ ಶಾಗೆ ಮನವಿಯಲ್ಲಿ ಉಲ್ಲೇಖಿಸಿದೆ.

ಬಿಜೆಪಿ ಶಾಸಕನ ಸಾವಿನ ಪ್ರಕರಣದ ತನಿಖೆಯನ್ನು ರಾಜ್ಯದ ಸಿಐಡಿ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಸಕ ದೇಬೇಂದ್ರನಾಥ ರಾಯ್ ಆತ್ಮಹತ್ಯೆ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ದೇಬೇಂದ್ರನಾಥ ರಾಯ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್‌ನಲ್ಲಿ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನು ಮುಂದುವರೆಸಿದ್ದಾರೆ.
ದೇಬೇಂದ್ರನಾಥ ರಾಯ್ ಶವ ಜುಲೈ 13ರ ಸೋಮವಾರ ಹುಟ್ಟೂರಿನಲ್ಲಿರುವ ಮಾರುಕಟ್ಟೆಯ ಕಟ್ಟಡವೊಂದರ ಎದುರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಕೊಲೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಹೆಮ್ಟಾಬಾದ್ ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದಿಂದ ಆಯ್ಕೆಯಾಗಿದ್ದ ದೇಬೇಂದ್ರನಾಥ ರಾಯ್ 2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಮೂಲಕ ಆಯ್ಕೆಯಾಗಿದ್ದರು.












Click it and Unblock the Notifications