ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಕಾರಿನ ಮೇಲೆ ಕಲ್ಲು ತೂರಾಟ
ನಂದಿಗ್ರಾಮ, ಏಪ್ರಿಲ್ 1: ಪಶ್ಚಿಮ ಬಂಗಾಳದಲ್ಲಿ ನಂದಿಗ್ರಾಮ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಬೆಂಗಾವಲಿನ ಮೇಲೆ ಗುರುವಾರ ಮಧ್ಯಾಹ್ನ ಕಲ್ಲು ತೂರಾಟ ನಡೆದಿದೆ. ಈ ದಾಳಿಯಲ್ಲಿ ಸುವೇಂದು ಅಧಿಕಾರಿ ಅದೃಷ್ಟವಶಾತ್ ಪಾರಾಗಿದ್ದಾರೆ.
ನಂದಿಗ್ರಾಮದ ಸತೇಂಗಬರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುವೇಂದು ಅಧಿಕಾರಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಲ್ಲುಗಳನ್ನು ಎಸೆಯಲಾಗಿದೆ. ಆದರೆ ಅವರು ಯಾವುದೇ ಹಾನಿಯಾಗದೆ ತಪ್ಪಿಸಿಕೊಂಡಿದ್ದಾರೆ. ನಂದಿಗ್ರಾಮ ಸೇರಿದಂತೆ ಬಂಗಾಳದ 30 ಕ್ಷೇತ್ರಗಳಿಗೆ ಎರಡನೆಯ ಹಂತದ ಮತದಾನ ನಡೆಯುವ ಸಂದರ್ಭದಲ್ಲಿಯೇ ಈ ದಾಲಿ ನಡೆದಿದೆ.
ಬಂಗಾಳ ಚುನಾವಣೆ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಅಹಿತಕರ ವಾತಾವರಣ
ಸುವೇಂದು ಅವರ ಕಾರಿನ ಹಿಂದೆ ಸಾಗುತ್ತಿದ್ದ ಮಾಧ್ಯಮದ ವಾಹನವೊಂದಕ್ಕೆ ಕಲ್ಲುಗಳು ಬಿದ್ದಿದ್ದು, ಕಾರಿಗೆ ತೀವ್ರ ಹಾನಿಯಾಗಿದೆ. ಇದಕ್ಕೂ ಮೊದಲು ನಂದಾನಾಯಕ್ ಬಾರ್ ಪ್ರೈಮರಿ ಶಾಲೆಗೆ ಬೆಳಿಗ್ಗೆ ಮೋಟಾರ್ ಸೈಕಲ್‌ನಲ್ಲಿ ತೆರಳಿದ್ದ ಸುವೇಂದು ಅಧಿಕಾರಿ, ನಂದಿಗ್ರಾಮದಲ್ಲಿ ಮೊದಲ ಬಾರಿ ತಮ್ಮ ಮತ ಚಲಾಯಿಸಿದರು.
'ನಂದಿಗ್ರಾಮದ ಜನರು ಬಿಜೆಪಿ ಪರವಾಗಿ ಮತ ಚಲಾಯಿಸಲು ಬರುತ್ತಿದ್ದಾರೆ. ಈ ಪ್ರದೇಶದ ಜನರ ಜತೆ ನನಗೆ ಬಹಳ ಹಳೆ ಬಾಂಧವ್ಯ ಇದೆ' ಎಂದು ಸುವೇಂದು ಹೇಳಿದ್ದಾರೆ.
ಪಶ್ಚಿಮ ಮಿಡ್ನಾಪುರದಲ್ಲಿನ ಕೇಶ್ಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಿಶ್ರಂಜನ್ ಕೊನಾರ್ ಅವರ ಬೆಂಗಾವಲಿನ ಮೇಲೆ ಕುಡ ಗುರುವಾರ ದಾಳಿ ನಡೆದಿರುವುದು ವರದಿಯಾಗಿದೆ.