ಬಾಂಗ್ಲಾದೇಶಕ್ಕೆ ಮೋದಿ ಪ್ರವಾಸದ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು
ಕೋಲ್ಕತಾ, ಮಾರ್ಚ್ 30: ಚುನಾವಣೆಯ ಸಂದರ್ಭದಲ್ಲಿ ನೆರೆಯ ಬಾಂಗ್ಲಾದೇಶಕ್ಕೆ ಪ್ರವಾಸ ನೀಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಇದಕ್ಕೂ ಮುನ್ನ, ಪ್ರಧಾನಿ ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಕೈಗೊಂಡ ಸಮಯದ ಕುರಿತು ಟೀಕೆ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಂಗಾಳದಲ್ಲಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿರಿಸಿಕೊಂಡೇ ಈ ಭೇಟಿ ನೀಡಲಾಗಿದೆ ಎಂದು ಕಿಡಿಕಾರಿದ್ದರು.
ಬಂಗಾಳ ಚುನಾವಣೆಯ ಸಂದರ್ಭದಲ್ಲಿ ನೆರೆಯ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿರುವುದು ಪ್ರಜಾಪ್ರಭುತ್ವದ ತತ್ವಗಳು ಮತ್ತು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಟಿಎಂಸಿ ತನ್ನ ದೂರಿನಲ್ಲಿ ಹೇಳಿದೆ.

ಪ್ರಧಾನಿ ಬಾಂಗ್ಲಾದೇಶಕ್ಕೆ ಭೇಟಿ ನೀಡುವುದರ ಕುರಿತು ಪಕ್ಷಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ಪ್ರವಾಸದ ಸಮಯ ಮುಖ್ಯವಾಗುತ್ತದೆ. ಮಾರ್ಚ್ 27ರಂದು ಮೋದಿ ಅವರ ಬಾಂಗ್ಲಾದೇಶ ಪ್ರವಾಸ ಕಾರ್ಯಕ್ರಮವನ್ನು ಟಿಎಂಸಿ ತೀವ್ರವಾಗಿ ವಿರೋಧಿಸುತ್ತದೆ. ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೋತ್ಸವ ಅಥವಾ ಬಂಗಬಂಧು ಜನ್ಮಶತಮಾನೋತ್ಸವಕ್ಕೂ ಈ ಭೇಟಿಗೂ ಯಾವುದೇ ಸಂಬಂಧವಿಲ್ಲ' ಎಂದು ಅದು ಆರೋಪಿಸಿದೆ.
ಪ್ರಧಾನಿ ಅವರ ಪ್ರವಾಸವು ಕೆಲವು ಕ್ಷೇತ್ರಗಳಲ್ಲಿನ ಮತದಾರರ ಮೇಲೆ ಪ್ರಭಾವ ಬೀರುವ ಒಂದೇ ಒಂದು ಉದ್ದೇಶದ ಕಾರಣದಿಂದ ಈ ಭೇಟಿ ನಡೆದಿದೆ ಎಂದು ಟಿಎಂಸಿ ಆರೋಪ ಮಾಡಿದೆ.












Click it and Unblock the Notifications