ಬಿಜೆಪಿ ಬದಲು ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿದ ಮೋದಿಯ ಸ್ವಂತ ತಮ್ಮ!
ಕೊಲ್ಕತ್ತ, ಅಕ್ಟೋಬರ್ 31: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಂತ ತಮ್ಮ ಪ್ರಹ್ಲಾದ್ ಮೋದಿ, ಬಿಜೆಪಿ ಬದಲಿಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಟಿಎಂಸಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಹೌದು, ನ್ಯಾಯ ಬೆಲೆ ಅಂಗಡಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಪ್ರಹ್ಲಾದ್ ಮೋದಿ ಅವರು ಬಿಜೆಪಿಯು ವಿರೋಧಿಸುತ್ತಾ ಬಂದಿರುವ ಟಿಎಂಸಿಗೆ ಬೆಂಬಲ ಘೋಷಿಸಿದ್ದಾರೆ. ಅವರ ಅಧ್ಯಕ್ಷತೆಯ ನ್ಯಾಯ ಬೆಲೆ ಅಂಗಡಿಗಳ ಒಕ್ಕೂಟ ಸಹ ಟಿಎಂಸಿಗೆ ಬೆಂಬಲ ಘೋಷಿಸಿದೆ.
ಈ ಬಗ್ಗೆ ನಿನ್ನೆ ಡಂಡಂನಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ಕೂಡಲೆ ಒಕ್ಕೂಟದಿಂದ ಮೋದಿ ವಿರೋಧ ಅಭಿಯಾನ (ಆಂಟಿ ಮೋದಿ) ಶುರು ಮಾಡುವುದಾಗಿಯೂ ಒಕ್ಕೂಟದ ಕಾರ್ಯದರ್ಶಿ ಬಿಸ್ವಾಂಬರ್ ಬಸು ಹೇಳಿದ್ದಾರೆ.

ಒಕ್ಕೂಟದ ಸದಸ್ಯರು ಕೆಲವೇ ದಿನಗಳಲ್ಲಿ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿ ಮೋದಿ ವಿರೋಧಿ ಅಭಿಯಾನ ಪ್ರಾರಂಭಿಸಲಿದ್ದಾರೆ ಆ ಅಭಿಯಾನದಲ್ಲಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಸಹ ಭಾಗಿ ಆಗಲಿದ್ದಾರೆ.

ಮಮತಾ ಬ್ಯಾನರ್ಜಿಗೆ ಮೋದಿ ತಮ್ಮ ಅಭಿನಂದನೆ
ನ್ಯಾಯಬೆಲೆ ಒಕ್ಕೂಟವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಗೌರವ ಸಲ್ಲಿಸಲು ಸಹ ನಿರ್ಧರಿಸಿದ್ದು, ಸರ್ಕಾರದ ಖಾದ್ಯೋ ಸಾಥಿ ಯೋಜನೆಯ ಯಶಸ್ಸಿಗಾಗಿ ಈ ಅಭಿನಂದನೆ ಸಲ್ಲಿಸಲಾಗುತ್ತಿದೆ.

ಎನ್‌ಡಿಎ ವಿರುದ್ದ ಹಿಂದೆಯೂ ವಾಗ್ದಾಳಿ
ಈ ಹಿಂದೆಯೂ ಅವರು ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು. 2015ರಲ್ಲಿಯೇ ಅವರು ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದರು. ಆದರೆ ಎಂದೂ ಮೋದಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿಲ್ಲ.

ರಫೆಲ್ ವಿಷಯದಲ್ಲಿ ಅಣ್ಣನ ಪರ ಬ್ಯಾಟಿಂಗ್
ರಫೆಲ್ ಹಗರಣದ ಬಗ್ಗೆ ಇತ್ತೀಚೆಗೆ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಅಣ್ಣನ ಪರ ವಹಿಸಿದ್ದರು. ಮೋದಿ ಸರ್ಕಾರ ಹಗರಣದಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಮೋದಿ ವಿರೋಧಿ ಅಭಿಯಾನ ಆರಂಭಿಸುತ್ತಿದ್ದಾರೆ.

ಮೋದಿಯ ಕುಟುಂಬ
ಮೋದಿ ಅವರಿಗೆ ಇಬ್ಬರು ಅಣ್ಣ, ಇಬ್ಬರು ತಮ್ಮ ಮತ್ತು ಒಬ್ಬ ತಂಗಿ ಇದ್ದಾರೆ. ಮೋದಿ ಸಹೋದರರು ಯಾರೂ ರಾಜಕೀಯದಲ್ಲಿ ಹೆಚ್ಚು ಪ್ರಭಾವಶಾಲಿ ಸ್ಥಾನಗಳಲ್ಲಿಲ್ಲ. ಪ್ರಹ್ಲಾದ್ ಮೋದಿ ಮಾತ್ರ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದಾರೆ.












Click it and Unblock the Notifications