'ದೀದಿ' ಕೈ ಸೇರಲಿವೆ 'ಜೈ ಶ್ರೀರಾಮ್' ಒಕ್ಕಣೆಯ 10 ಲಕ್ಷ ಪತ್ರಗಳು!
Recommended Video
ಕೋಲ್ಕತ್ತಾ, ಜೂನ್ 03: "ಜೈ ಶ್ರೀರಾಮ್" ಎಂದು ಘೋಷಣೆ ಕೂಗಿದವರನ್ನು ತರಾಟೆಗೆ ತೆಗೆದುಕೊಂಡ ಮತ್ತು ಅವರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದ ಮಮತಾ ಬ್ಯಾನರ್ಜಿ ಬಹುಸಂಖ್ಯಾತ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆ ಕಾರಣದಿಂದ ಮಮತಾ ಬ್ಯಾನರ್ಜಿ ಅವರಿಗೆ ದೇಶದ ನಾನಾ ಕಡೆಗಳಿಂದ ಜೈ ಶ್ರೀರಾಮ್' ಎಂಬ ಸಾಲುಗಳನ್ನು ಬರೆದ ಪೋಸ್ಟ್ ಕಾರ್ಡ್ ಗಳನ್ನು ಕಳಿಸಲು ರಾಮಭಕ್ತರು ಮುಂದಾಗಿದ್ದಾರೆ! ಒಟ್ಟು 10 ಲಕ್ಷದಷ್ಟು ಪೋಸ್ಟ್ ಕಾರ್ಡ್ ಗಳನ್ನು ಅವರಿಗೆ ಕಳಿಸುವ ಈ ಅಭಿಯಾನ ಈಗಾಗಲೇ ಆರಂಭವಾಗಿದ್ದು, ದೀದಿ ಮನೆ ಮುಂದೆ ಪತ್ರದ್ದೇ ಹೊಳೆ ಹರಿದರೆ ಅಚ್ಚರಿಯೇನಿಲ್ಲ!
ಅದರೊಟ್ಟಿಗೆ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಸಹ ಮಮತಾ ಬ್ಯಾನರ್ಜಿ ಅವರಿಗೆ 'ಬೇಗನೇ ಗುಣಮುಖರಾಗಿ' ಎಂಬ ಒಕ್ಕಣೆಯೊಂದಿಗೆ ಒಂದು ಪೋಸ್ಟ್ ಕಾರ್ಡ್ ಕಳಿಸಲು ನಿರ್ಧರಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ವರ್ತನೆ ವಿಚಿತ್ರವಾಗಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಿಸುತ್ತಿದೆ. ಆದ್ದರಿಂದ ಅವರು ಬಹುಬೇಗನೇ ಗುಣಮುಖರಾಗಲಿ ಎಂದು ಹಾರೈಸಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಸುಪ್ರಿಯೋ ಲೇವಡಿಯ ಧ್ವನಿಯಲ್ಲಿ ಹೇಳಿದ್ದಾರೆ.

ಮೇ 30 ರಂದು, ಗುರುವಾರ ಮಮತಾ ಬ್ಯಾನರ್ಜಿ ಅವರು ಕಾರು ಚಲಿಸುತ್ತಿದ್ದ ವೇಳೆಯಲ್ಲಿ ರಸ್ತೆಯಲ್ಲಿದ್ದ ಕೆಲವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದಕ್ಕೆ ಆರಂಭಿಸಿದ್ದರು. ಇದರಿಂದ ಕೋಪಗೊಂಡ ಮಮತಾ ಬ್ಯಾನರ್ಜಿ ಕಾರನ್ನು ಅಲ್ಲಿಯೇ ನಿಲ್ಲಿಸಿ, ಅಲ್ಲಿದ್ದ ಜನರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಅವರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈ ಎಲ್ಲಾ ಘಟನೆಗಳ ನಂತರ ಮಮತಾ ಬ್ಯಾನರ್ಜಿ ಅವರು ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಿಸಿದ್ದು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರ ಚಿತ್ರದೊಂದಿಗೆ "ಜೈ ಶ್ರೀರಾಮ್, ಜೈ ಬಾಂಗ್ಲಾ" ಎಂಬ ಘೋಷಣೆಯನ್ನು ಪ್ರೊಫೈಲ್ ಚಿತ್ರದಲ್ಲಿ ಹಾಕಿಕೊಂಡಿದ್ದಾರೆ.












Click it and Unblock the Notifications