ಮಮತಾ ಬ್ಯಾನರ್ಜಿ ಕುರಿತಾದ ಸಿನಿಮಾ ಟ್ರೇಲರ್ ತೆರವಿಗೆ ಆಯೋಗ ಕ್ರಮ
ಕೋಲ್ಕತಾ, ಏಪ್ರಿಲ್ 24: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೀವನಗಾಥೆ ಆಧಾರಿತ ಚಿತ್ರದ ಟ್ರೇಲರ್‌ಅನ್ನು ವೆಬ್‌ಸೈಟ್‌ಗಳಿಂದ ತೆರವುಗೊಳಿಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.
'ಬಗಿನಿ-ಬೆಂಗಾಲ್ ಟೈಗ್ರೆಸ್' ಸಿನಿಮಾದ ಟ್ರೇಲರ್‌ಗಳನ್ನು ಕನಿಷ್ಠ ಮೂರು ವೆಬ್‌ಸೈಟ್‌ಗಳಿಂದ ತೆರವುಗೊಳಿಸಲಾಗುವುದು. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಬಯೋಪಿಕ್ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ವರದಿ ಸಲ್ಲಿಸಿದ್ದಾರೆ.
ಲೋಕಸಭೆ ಚುನಾವಣೆ ಮುಗಿಯುವವರೆಗೂ ಮಮತಾ ಕುರಿತಾದ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. ಬಂಗಾಳ ಸೇರಿದಂತೆ ಐದನೆ ಹಂತದ ಮತದಾನ ನಡೆಯಲಿರುವ ದಿನದ ಮೂರು ದಿನ ಮೊದಲು, ಅಂದರೆ ಮೇ 3ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು.

ರುಮಾ ಚಕ್ರವರ್ತಿ ಅವರು ಮಮತಾ ಬ್ಯಾನರ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೇಲರ್ ಅನ್ನು ಏಪ್ರಿಲ್ 13ರಂದು ಬಿಡುಗಡೆ ಮಾಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಜೀವನಗಾಥೆಯ ಸಿನಿಮಾ ಕೂಡ ಚುನಾವಣೆಯ ಸಂದರ್ಭದಲ್ಲಿಯೇ ಬಿಡುಗಡೆಗೆ ಸಿದ್ಧವಾಗಿತ್ತು. ಏಪ್ರಿಲ್ 12ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ವಿವಾದ ಸೃಷ್ಟಿಸಿದ್ದರಿಂದ ಬಿಡುಗಡೆ ಮುಂದೂಡಲಾಗಿದೆ.
ಮೋದಿ ಅವರ ಸಿನಿಮಾ ಕುರಿತು ಚುನಾವಣಾ ಆಯೋಗ ನೀಡಿದ ಆದೇಶವನ್ನೇ ಮಮತಾ ಕುರಿತಾದ ಸಿನಿಮಾಕ್ಕೂ ಅನ್ವಯಿಸಲಾಗಿದೆ.












Click it and Unblock the Notifications