ಪಶ್ಚಿಮ ಬಂಗಾಳ; ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ವಿಳಂಬಕ್ಕೆ ಅಸಮಾಧಾನ
ಕೋಲ್ಕತ್ತಾ, ಮಾರ್ಚ್ 12: ಇನ್ನು ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವಲ್ಲಿ ವಿಳಂಬ ಮಾಡುತ್ತಿರುವುದರ ಕುರಿತು ಪಶ್ಚಿಮ ಬಂಗಾಳ ಕಾಂಗ್ರೆಸ್ ಉಸ್ತುವಾರಿ ಜಿತಿನ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಲೋಕಸಭಾ ಸಂಸದ ಅಧೀರ್ ರಂಜನ್ ಚೌಧುರಿ ಅವರಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಉಸ್ತುವಾರಿ ನೀಡಲಾಗಿದೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿನ ಮೈತ್ರಿ ರಚನೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಸಮಿತಿ ರಚನೆ ಮಾಡಿದೆ. ಚೌಧುರಿ, ಪ್ರದೀಪ್ ಭಟ್ಟಾಚಾರ್ಯ, ನೇಪಾಳ್ ಮಹತೊ ಹಾಗೂ ಅಬ್ದುಲ್ ಮನ್ನನ್ ಅವರು ಈ ಸಮಿತಿಯಲ್ಲಿದ್ದಾರೆ.
ಅಭ್ಯರ್ಥಿಗಳ ಟಿಕೆಟ್ ಅಂತಿಮಗೊಳಿಸುವಿಕೆಯಲ್ಲಿನ ವಿಳಂಬವನ್ನು ಜೆಪಿ ಅಗರ್ ವಾಲ್ ಅವರ ನೇತೃತ್ವದ ಕಾಂಗ್ರೆಸ್ ಸಮಿತಿಯೂ ಪ್ರಶ್ನಿಸಿದೆ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವು ಎಡಪಕ್ಷ ಹಾಗೂ ಐಎಸ್‌ಎಫ್ ಜೊತೆ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ. 92 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು, ಇಲ್ಲಿಯವರೆಗೂ ಕೇವಲ 13 ಸೀಟುಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಶುಕ್ರವಾರವಷ್ಟೇ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು ಚುನಾವಣೆ ಆರಂಭಗೊಳ್ಳಲಿದ್ದು, 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 29ಕ್ಕೆ ಅಂತಿಮ ಹಂತದ ಚುನಾವಣೆ ನಡೆಯಲಿದ್ದು, ಮೇ 2ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications