'ಬಂಗಾಳದ 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಹಿಂಪಡೆಯುತ್ತೇನೆ, ಆದರೆ...': ದೀದಿ
ಕೋಲ್ಕತ್ತಾ, ಮೇ 09: "ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಟಿಎಂಸಿ ಅಭ್ಯರ್ಥಿಗಳನ್ನು ನಾನು ಸ್ಪರ್ಧೆಯಿಂದ ಹಿಂಪಡೆಯಲು ಸಿದ್ಧ. ಆದರೆ ಅದಕ್ಕೂ ಮುನ್ನ ನನ್ನ ಮೇಲೆ ನೀವು(ನರೇಂದ್ರ ಮೋದಿ) ಮಾಡಿರುವ ಆರೋಪಗಳನ್ನೆಲ್ಲ ಸಾಬೀತು ಪಡಿಸಿಬೇಕು" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬಂಕುರದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಅವರಿಗೆ ಬಹಿರಂಗವಾಗಿ ಸವಾಲೆಸೆದರು. "ಕಲ್ಲಿದ್ದಲು ಹಗರಣದಲ್ಲಿ ನಮ್ಮ ಹೆಸರಿದೆ ಎಂದ ನೀವು ಆರೋಪ ಸಾಬೀತುಪಡಿಸಿದ್ದೇ ಆದಲ್ಲಿ ನಾನು ಎಲ್ಲಾ ಅಭ್ಯರ್ಥಿಗಳನ್ನು ಹಿಂಪಡೆಯಲು ಸಿದ್ಧ. ಅಕಸ್ಮಾತ್ ನೀವು ಹೇಳಿದ್ದು ಸುಳ್ಳಾದರೆ ನೀವು ಸಾರ್ವಜನಿಕರ ಮುಂದೆ ನೂರು ಬಾರಿ ಬಸ್ಕಿ ಹೊಡೆಯಬೇಕು" ಎಂದು ಮಮತಾ ಬ್ಯಾನರ್ಜಿ ಸವಾಲೆಸೆದಿದ್ದಾರೆ.

ಇಂದು ಬೆಳಿಗ್ಗೆಯಷ್ಟೇ ಬಂಕುರದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. "ದೀದೀ, ನನಗೆ ನಿಮ್ಮ ಮೇಲೆ ಗೌರವವಿದೆ. ನೀವು ನನಗೆ ಕಪಾಳಮೋಕ್ಷ ಮಾಡಿದರೆ ಅದನ್ನೇ ನಾನು ಆಶೀರ್ವಾದ ಎಂದು ಭಾವಿಸುತ್ತೇನೆ. ಹಾಗೆಯೇ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ನಿಮ್ಮ ಸಹೋದ್ಯೋಗಿಗಳಿಗೂ ಕಪಾಳಮೋಕ್ಷ ಮಾಡಿ ಎಂಬುದು ನನ್ನ ಮನವಿ" ಎಂದು ಮೋದಿ ಹೇಳಿದ್ದರು.
ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿತ್ತು. ಈಗಾಗಲೇ ಐದು ಹಂತಗಳ ಮತದಾನ ನಡೆದಿದ್ದು, ಇನ್ನೆರಡು ಹಂತಗಳ ಮತದಾನ ಬಾಕಿ ಇದೆ. ಫಲಿತಾಂಶ ಮೇ 23 ರಂದು ಹೊರಬೀಳಲಿದೆ.












Click it and Unblock the Notifications