ಅವಾಚ್ಯ ಶಬ್ದಗಳಿಂದ ನಿಂದಿಸಿದ ವೈದ್ಯರನ್ನೂ ಕ್ಷಮಿಸಿದ್ದೇನೆ: ದೀದಿ
ಕೋಲ್ಕತ್ತಾ, ಜೂನ್ 14: ಪ್ರತಿಭಟನಾನಿರತ ವೈದ್ಯರ ಮನವೊಲಿಕೆಗೆ ತೆರಳಿದರೆ, ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.
ಭದ್ರತೆ ನೀಡಬೇಕು ಎಂದು ಬೇಡಿಕೆ ಇಟ್ಟು ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯ ವೈದ್ಯರು ಕಳೆದ ನಾಲ್ಕು ದಿನಗಳಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೋಲ್ಕತ್ತದ ಎಸ್ ಎಸ್ ಕೆ ಎಂ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ವೈದ್ಯರನ್ನು ಮಮತಾ ಬ್ಯಾನರ್ಜಿ ಭೇಟಿಯಾದರು. ಆದರೆ ಈ ಸಂದರ್ಭದಲ್ಲಿ ವೈದ್ಯರು ಮಮತಾ ಬ್ಯಾನರ್ಜಿ ಅವರ ಬಳಿ ನಿಂದನೆಯ ಧಾಟಿಯಲ್ಲಿ ಮಾತನಾಡಿದರು ಎಂದು ಸ್ವತಃ ದೀದಿ ದೂರಿದ್ದಾರೆ.
"ಆಸ್ಪತ್ರೆಗೆ ಭೇಟಿ ನೀಡಿದ್ದ ನಾನು ವೈದ್ಯರೊಂದಿಗೆ ಮಾತನಾಡುವ ಸಲುವಾಗಿಯೇ ತುರ್ತು ನಿಗಾ ಘಟಕಕ್ಕೆ ತೆರಳಿದ್ದೆ. ಅಲ್ಲಿ ಖಾಸಗಿಯಾಗಿ ವೈದ್ಯರ ಬಳಿ ಮಾತನಾಡಲು ಮುಂದಾದರೆ, ಅಲ್ಲಿದ್ದ ವೈದ್ಯರು ನನ್ನನ್ನೇ ನಿಂದಿಸಿದರು, ಅವಾಚ್ಯ ಶಬ್ದಗಳಿಂಡ ಮಾತನಾಡಿದರು. ಆದರೂ ನಾನು ಅವರನ್ನು ಕ್ಷಮಿಸಿದ್ದೇನೆ. ನನಗೆ ಅವರು ಎಷ್ಟೇ ನಿಂದಿಸಿದರೂ ಅಡ್ಡಿಯಿಲ್ಲ. ನನಗೆ ಅವರು ಸೇವೆಗೆ ಹಾಜರಾಗುವುದಷ್ಟೇ ಮುಖ್ಯ" ಎಂದು ದೀದಿ ಹೇಳಿದ್ದಾರೆ.

ಜೂನ್ 10 ರಂದು 80 ವರ್ಷ ವಯಸ್ಸಿನ ರೋಗಿಯೊಬ್ಬರನ್ನು ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದರೆ ಅವರ ಸಾವಿಗೆ ಕಿರಿಯ ವೈದ್ಯರೊಬ್ಬರ ನಿರ್ಲಕ್ಶ್ಯವೇ ಕಾರಣ ಎಂದು ದೂರಿ, ರೋಗಿಯ ಸಂಬಂಧಿಗಳು ಪರಿಬೊನೊ ಮುಖರ್ಜಿ ಎಂಬ ವೈದ್ಯರ ಮೇಲೆ ದಾಳಿ ನಡೆಸಿದ್ದರು. ಇದರಿಂದಾಗಿ ತೀವ್ರವಾಗಿ ಗಾಯಗೊಂಡ ವೈದ್ಯರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸಹಜವಾಗಿ ಸಂಭವಿಸಿದ ಘಟನೆಗೆ, ವೈದ್ಯರನ್ನು ಹೊಣೆಯಾಗಿಸುವುದು ಸರಿಯಲ್ಲ, ಆಸ್ಪತ್ರೆಯ ಹಾಸ್ಟೆಲ್ ಆವರಣದಲ್ಲೇ ವೈದ್ಯರ ಮೇಲೆ ದಾಳಿ ನಡೆಯುತ್ತಿದ್ದರೂ ವೈದ್ಯರ ರಕ್ಷಣೆಗೆ ಯಾರೂ ಇರಲಿಲ್ಲ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದ್ದು, ಶುಕ್ರವಾರ ಗಂಭೀರ ಸ್ವರೂಪ ಪಡೆದಿದೆ.
ಇಂದು ಹೊರರೋಗಿಗಳ ವಿಭಾಗ ಮತ್ತು ತುರ್ತು ಸೇವೆಯನ್ನೂ ಬಂದ್ ಮಾಡಲಾಗಿದೆ. ಜೊತೆಗೆ ದೇಶದ ಇತರ ರಾಜ್ಯಗಳೂ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡುತ್ತಿವೆ.












Click it and Unblock the Notifications