ಕೋಲಾರಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ ಸರ್ಕಾರ
ಕೋಲಾರ, ಫೆಬ್ರವರಿ 09; ಕೋಲಾರದ ಕೃಷಿ ವಿಜ್ಞಾನ ಕೇಂದ್ರಕ್ಕೆ 3.5 ಕೋಟಿ ರೂ. ವೆಚ್ಚದ ಸಾಮಾನ್ಯ ಪರಿವರ್ತಕ ಕೇಂದ್ರ (Common Incubation Centre) ಕೇಂದ್ರ ಸರ್ಕಾರದಿಂದ ಮಂಜೂರು ಮಾಡಲಾಗಿದೆ.
ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯ ಕೋಲಾರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಟೊಮೊಟೋ, ಹಣ್ಣು, ತರಕಾರಿ ಮತ್ತು ಬೇಕರಿ ಉತ್ಪಾದನೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಾಗಿ ಸಾಮಾನ್ಯ ಪರಿವರ್ತಕ ಕೇಂದ್ರದ ಸ್ಥಾಪನೆಗೆ ಆದೇಶವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ನ ಬಾಗಲಕೊಟೆ ತೋಟಗಾರಿಕೆ ವಿಶ್ವವಿದ್ಯಾಲಯದಡಿ ಕೋಲಾರದಲ್ಲಿ ಸ್ಥಾಪಿಸಲಾದ ಕೃಷಿ ವಿಜ್ಞಾನ ಕೇಂದ್ರವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಳೆದ ವರ್ಷದ ಅಕ್ಟೋಬರ್ 22 ರಂದು ಉದ್ಘಾಟಿಸಿದ್ದರು.

ಟೊಮಾಟೋ ಬೆಳೆಗೆ ಕೋಲಾರ ಜಿಲ್ಲೆಯನ್ನು ಒಂದು ಜಿಲ್ಲೆ ಒಂದು ಉತ್ಪಾದನೆಯಲ್ಲಿ ಕೇಂದ್ರಸರ್ಕಾರ ಆಯ್ಕೆ ಮಾಡಿಕೊಂಡಿದ್ದು, ರೈತರು ಬೆಳೆದ ಟೊಮಾಟೋಗಳ, ಹಣ್ಣು, ತರಕಾರಿ ಇತ್ಯಾದಿಗಳ ಮೌಲ್ಯ ವರ್ಧನೆಗೆ ಮತ್ತು ಅವುಗಳನ್ನು ಸಂಸ್ಕರಣೆ ಮಾಡಲು ಅನುಕೂಲವಾಗಲು ಸಾಮಾನ್ಯ ಪರಿವರ್ತಕ ಕೇಂದ್ರ ಮಂಜೂರು ಮಾಡಿಸುವುದಾಗಿ ಶೋಭಾ ಕರಂದ್ಲಾಜೆ ಭರವಸೆ ನೀಡಿದ್ದರು.
ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿಗಳಿಂದ ಈ ಕೇಂದ್ರದ ಅವಶ್ಯಕತೆ ಮತ್ತು ರೈತರಿಗೆ ಸಿಗುವ ಪ್ರಯೋಜನೆಗಳ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆಯವರು ವಿವರಣೆ ಪಡೆದಿದ್ದರು.
ರೈತರು ಬೆಳೆದ ಬೆಳೆಗಳಿಗೆ ಅದರಲ್ಲೂ ಟೊಮಾಟೋ ಬೆಳೆಯ ಉತ್ತೇಜನಕ್ಕಾಗಿ ಸಾಮಾನ್ಯ ಪರಿವರ್ತಕ ಕೇಂದ್ರ ಮಂಜೂರು ಮಾಡುವಂತೆ ಸರ್ಕಾರದ ಆಹಾರ ಸಂಸ್ಕರಣಾ ಉದ್ಯಮ ಸಚಿವರಿಗೆ ಪತ್ರ ಬರೆದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿದ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯ ಈ ಘಟಕ ಸ್ಥಾಪನೆಗೆ ದಿನಾಂಕ 8/2/2022ರಂದು ಮಂಜೂರಾತಿ ಅದೇಶವನ್ನು ಹೊರಡಿಸಿದೆ. ಈ ಘಟಕ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ, ಇದರ ವೆಚ್ಚವನ್ನು ಕೇಂದ್ರ ಸರ್ಕಾರ PMFME ಯೋಜನೆಯಡಿಯಲ್ಲಿ ಮಂಜೂರು ಮಾಡಿದೆ.
"ಈ ಘಟಕ ಸ್ಥಾಪನೆಯಿಂದ ಕೋಲಾರದ ರೈತರಿಗೆ, ಟೊಮಾಟೋ ಬೆಳೆಗಾರರಿಗೆ ಮತ್ತು ರೈತ ಉತ್ಪಾದಕ ಸಂಘಟನೆಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಉಪಯೋಗವಾಗಲಿವೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೋಲಾರದ ರೈತರಿಗೆ ನೀಡಿದ ಈ ಸೌಕರ್ಯಕ್ಕಾಗಿ ಸಚಿವೆ ಶೋಭಾ ಕರಂದ್ಲಾಜೆ ಕೋಲಾರದ ಸಮಸ್ತ ರೈತರು ಹಾಗೂ ಟೊಮಾಟೋ ಬೆಳೆಗಾರರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರದ ಆಹಾರ ಸಂಸ್ಕರಣಾ ಉದ್ಯಮ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನೀಡಿದ ಈ ಸೌಲಭ್ಯವನ್ನು ಕೋಲಾರದ ಟೊಮೊಟೋ ಬೆಳೆಗಾರರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ಕೇಂದ್ರವನ್ನು ಶೀಘ್ರವಾಗಿ ಸ್ಥಾಪಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳಿಗೆ ಸಲಹೆ ನೀಡಿದ್ದು ಮತ್ತು ರೈತರು ಮತ್ತು ರೈತ ಉತ್ಪಾದಕ ಸಂಘಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳು ಇದರ ಸದುಪಯೋಗ ಪಡೆದುಕೊಳ್ಳಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಶೀಘ್ರ ಕ್ರಮಕ್ಕೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಕೋಲಾರದ ಕೃಷಿ ವಿಜ್ಞಾನದ ಕೇಂದ್ರದ ಅಧಿಕಾರಿಗಳು/ ವಿಜ್ಞಾನಿಗಳು ಅಪಾರ ಸಂತಸ ವ್ಯಕ್ತ ಪಡಿಸಿದ್ದಾರೆ.
ಕೋಲಾರ ಜಿಲ್ಲೆಯೊಂದರಲ್ಲೇ ಸುಮಾರು 1,500 ಹೆಕ್ಟೇರ್ ಪ್ರದೇಶದಲ್ಲಿ ಟೊಮಾಟೋ ಮತ್ತು ತರಕಾರಿಗಳನ್ನು ಬೆಳೆಯಾಲಾಗುತ್ತದೆ. ಕೋಲಾರ ಮಾರುಕಟ್ಟೆಯಿಂದ ದೇಶದ ಎಲ್ಲಾ ರಾಜ್ಯಗಳು ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶಕ್ಕೂ ಟೊಮಾಟೋ ರಫ್ತು ಮಾಡಲಾಗುತ್ತದೆ. ಏಷ್ಯಾದ 2ನೇ ಅತಿ ದೊಡ್ಡ ಟೊಮಾಟೋ ಮಾರುಕಟ್ಟೆ ಎಂಬ ಹೆಗ್ಗಳಿಕೆ ಕೂಡಾ ಈ ಮಾರುಕಟ್ಟೆಗಿದೆ.












Click it and Unblock the Notifications