ಮದುವೆಯಾಗಿ ರೂಮ್‌ಗೆ ಹೋಗಿದ್ದ ನವಜೋಡಿ ದುರಂತ ಅಂತ್ಯ: ಅಷ್ಟಕ್ಕೂ ಆಗಿದ್ದೇನು..?
ಕೋಲಾರ, ಆಗಸ್ಟ್ 08: ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಯೊಂದು ಮದುವೆಯಾದ ದಿನವೇ ದುರಂತ ಅಂತ್ಯ ಕಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮದುವೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ವಧು-ವರರಿಬ್ಬರು ಪರಸ್ಪರ ಜಗಳವಾಡಿಕೊಂಡು ಕೈ-ಕೈ ಮಿಲಾಯಿಸಿ ಕೊನೆಗೆ ಇಬ್ಬರೂ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ. ನವೀನ್ (29) ಹಾಗೂ ಲಿಖಿತಶ್ರೀ (20) ಮೃತ ದುರ್ದೈವಿಗಳು.
ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದ ನವೀನ್ ಹಾಗೂ ಲಿಖಿತಶ್ರೀ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಬಳಿಕ ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಾರೆ. ನವೀನ್-ಲಿಖಿತಶ್ರೀ ಪ್ರೀತಿಗೆ ಕುಟುಂಬಸ್ಥರು ಕೂಡ ಒಪ್ಪಿಗೆ ಸೂಚಿಸಿದ್ದು, ಎರಡೂ ಕುಟುಂಬದವರನ್ನು ಒಪ್ಪಿಸಿ ನಿನ್ನೆ( ಆಗಸ್ಟ್ 07) ಬುಧವಾರ ಸ್ಥಳೀಯ ದೇವಾಲಯದಲ್ಲಿ ಮದುವೆಯಾಗಿದ್ದರು.

ನವೀನ್-ಲಿಖಿತಶ್ರೀ ಪ್ರೀತಿಸಿ ಮದುವೆಯಾದ ಖುಷಿಯಲ್ಲಿದ್ದರು. ಮದುವೆ ಮುಗಿದ ಬಳಿಕ ಇಬ್ಬರೂ ರೂಮಿಗೆ ಹೋಗಿದ್ದಾರೆ. ರೂಮಿಗೆ ಹೋಗುವವರೆಗೂ ಇಬ್ಬರು ಖುಷಿಯಲ್ಲೇ ಇದ್ದು ಕುಟುಂಬಸ್ಥರ ಜೊತೆಗೂ ಕೂಡ ಚೆನ್ನಾಗಿ ಮಾತನಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ಮದುವೆ ಬಳಿಕ ನಡೆದದ್ದೇ ಬೇರೆಯಾಗಿದ್ದು, ಮದುವೆ ಸಂತಸ ತುಂಬಿಕೊಂಡಿದ್ದ ಎರಡೂ ಮನೆಗಳಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
ರೂಮ್‌ಗೆ ಹೋದ ನವೀನ್-ಲಿಖಿತಶ್ರೀ ನಡುವೆ ಅದೇನಾಯ್ತೋ ಈವರೆಗೂ ಯಾರಿಗೂ ಗೊತ್ತಿಲ್ಲ, ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮೊದ- ಮೊದಲು ಮಾತಿನಿಂದ ಆರಂಭವಾದ ಜಗಳ ಬಳಿಕ ಅತಿರೇಖಕ್ಕೇರಿದೆ. ಕೋಪದಲ್ಲಿದ್ದ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೈಗೆ ಸಿಕ್ಕ ವಸ್ತುಗಳಿಂದ ಬಡಿದಾಡಿಕೊಂಡ ಪರಿಣಾಮ ಇಬ್ಬರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಕುಟುಂಬಸ್ಥರು ಇಬ್ಬರನ್ನೂ ಕೂಡ ಕೂಡಲೇ ಕೋಲಾರದ ಅರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ನಿನ್ನೆ ನವ ವಧುವಾಗಿದ್ದ ಲಿಖಿತಶ್ರೀ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ನವೀನ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ರವಾನಿಸಲಾಗಿತ್ತು. ಆದರೆ ಈತನೂ ಕೂಡ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಖುಷಿಯಾಗಿ ಹೊಸ ಜೀವನ ಆರಂಭಿಸಬೇಕಿದ್ದ ಜೋಡಿ ಕೋಪದ ಕೈಗೆ ಬುದ್ಧಿಕೊಟ್ಟು ದುರಂತ ಅಂತ್ಯ ಕಂಡಿದೆ.












Click it and Unblock the Notifications