MLA Srinivas Gowda: ಕೋಲಾರ ಚುನಾವಣ ಕಣ: ಸಿದ್ದರಾಮಯ್ಯನಿಗೂ ಟಿಕೆಟ್ ಇಲ್ಲ, ತಮಗೂ ಇಲ್ಲ; ಅತಂತ್ರರಾದ ಶ್ರೀನಿವಾಸ ಗೌಡ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಕೋಲಾರ ಕ್ಷೇತ್ರದ ಹಾಲಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಸಹ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ತಿಳಿಸಿದ್ದರು.
ಕೋಲಾರ ಶಾಸಕ ಶ್ರೀನಿವಾಸ ಗೌಡ ಅವರು 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಅಲ್ಲದೇ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ 5 ಬಾರಿ ಶಾಸಕರಾಗಿದ್ದರು. ಆದರೆ ಕಳೆದ ವಿಧಾನ ಪರಿಷತ್ ಚುನಾವಣೆ ಸಮಯದಿಂದ ಜೆಡಿಎಸ್‌ನಿಂದ ದೂರವಾಗಿ ಕಾಂಗ್ರೆಸ್ ಪಾಳಯ ಸೇರಿದ್ದರು. ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ, ಬದಲಾಗಿ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುತ್ತೇನೆ ಎಂದಿದ್ದರು.

ಎರಡು ತಿಂಗಳುಗಳ ಹಿಂದೆಯೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಭರ್ಜರಿ ರೋಡ್ ಶೋ ನಡೆಸಿ, ಬಳಿಕ ಕಾರ್ಯಕರ್ತರ ಸಮಾವೇಶ ಮಾಡಿದ್ದರು. ಈ ವೇಳೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದಿದ್ದರು. ಇದರಿಂದ ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಂತೋಷಗೊಂಡಿದ್ದರು.
ಸಿದ್ದರಾಮಯ್ಯ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವರ ಆಪ್ತ ಬಳಗದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಭೈರತಿ ಸುರೇಶ್, ಎಚ್‌ಎಂ ರೇವಣ್ಣ, ಶಾಸಕ ಶ್ರೀನಿವಾಸ ಗೌಡ ಸೇರಿದಂತೆ ಕೆಲವು ನಾಯಕರು ಸಿದ್ದರಾಮಯ್ಯಗೆ ಕೋಲಾರದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು.
ಸಿದ್ದರಾಮಯ್ಯ ಸ್ಪರ್ಧೆ ಖಚಿತಪಡಿಸಿದ ವೇಳೆ ಕಾರ್ಯನಿರತವಾದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸಿದ್ದರಾಮಯ್ಯರಿಗೆ ಮುಕ್ತ ಆಹ್ವಾನ ನೀಡದರು. ದಿನ ಕಳೆದಂತೆ ಕೋಲಾರದ ಚಿತ್ರಣ ಬದಲಾಗುತ್ತಿದ್ದಂತೆ, ಸಿದ್ದರಾಮಯ್ಯ ಅವರ ಆಪ್ತ ಬಳಗ ಒಂದರ ಮೇಲೊಂದು ಆಂತರಿಕ ಸಮೀಕ್ಷೆ ನಡೆಸಿತು.

ಉಲ್ಟಾ ಹೊಡೆದ ಸಿದ್ದರಾಮಯ್ಯ
ಬಿಜೆಪಿಯ ಅಭ್ಯರ್ಥಿ ವರ್ತೂರು ಪ್ರಕಾಶ್ ಮತ್ತು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಭಾರೀ ಪೈಪೋಟಿ ನೀಡಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದು ಸರ್ವೇ ವರದಿಗಳು ಹೇಳಿದವು. ಆಗ ಕೋಲಾರ ಕ್ಷೇತ್ರದಲ್ಲಿ ಗೆಲುವು ಸುಲಭವಲ್ಲ ಎಂದು ತಿಳಿಯುತ್ತಿದ್ದಂತೆಯೇ ಸಿದ್ದರಾಮಯ್ಯ ಉಲ್ಟಾ ಹೊಡೆದರು.
"ನನಗೆ ಕೋಲಾರದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರ ಒತ್ತಡವಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಎಲ್ಲಿ ಹೇಳುತ್ತದೆಯೋ ಅಲ್ಲಿ ಸ್ಪರ್ಧಿಸುತ್ತೇನೆ. ತವರು ಕ್ಷೇತ್ರ ವರುಣಾದಿಂದಲೂ ಸ್ಪರ್ಧಿಸುವಂತೆ ಅಲ್ಲಿನ ಜನ ಹೇಳುತ್ತಿದ್ದಾರೆ," ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು.
ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ನಡುವಿನ ಸಭೆಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದ ಮಹತ್ವದ ಚರ್ಚೆ ನಡೆಸಲಾಯಿತು. ಆಗ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಕೋಲಾರದ ಬದಲು ತವರು ಕ್ಷೇತ್ರ ವರುಣಾದಿಂದ ಸ್ಪರ್ಧಿಸುವಂತೆ ಸೂಚಿಸಿದರು.

ಕೋಲಾರ ಮತ್ತು ವರುಣಾ ಈ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಅವಕಾಶ ನೀಡಬೇಕೆಂಬ ಸಿದ್ದರಾಮಯ್ಯನವರ ಬೇಡಿಕೆಗೆ ಹೈಕಮಾಂಡ್ ಸೊಪ್ಪು ಹಾಕಲಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರಿಂದಲೇ ಭಾರೀ ವಿರೋಧ ವ್ಯಕ್ತವಾಯಿತು. ಹೀಗಾಗಿ 2023ರ ಚುನಾವಣೆಗಾಗಿ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲೇ ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರ ನೀಡಲಾಗಿತ್ತು.
ಸಿದ್ದರಾಮಯ್ಯ ಸೋಲಿಸಲು ಚಕ್ರವ್ಯೂಹ
ಇನ್ನು ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ, ಹೇಗಾದರೂ ಮಾಡಿ ಸೋಲಿಸಲು ಕಾಂಗ್ರೆಸ್‌ನ ಕೆಲವು ನಾಯಕರು ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಚಕ್ರವ್ಯೂಹ ರಚನೆ ಮಾಡಲು ಸಿದ್ಧರಾಗಿದ್ದ ಎನ್ನಲಾಗಿದೆ. ಇನ್ನು ಕೋಲಾರದ ಜನರಿಂದಲೂ ಸಿದ್ದರಾಮಯ್ಯ ಸ್ಪರ್ಧೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ಥಳೀಯ ಅಭ್ಯರ್ಥಿಗಳಿಗೆ ಮಣೆ ಹಾಕುವುದಾಗಿ ಅಭಿಪ್ರಾಯ ತಿಳಿಸಿದ್ದರು.
ಇದೀಗ ಶ್ರೀನಿವಾಸ ಗೌಡ ಅತಂತ್ರ
ಸಿದ್ದರಾಮಯ್ಯಗೆ ಕೋಲಾರದಿಂದ ಸ್ಪರ್ಧಿಸಲು ಪಕ್ಷದ ಹೈಕಮಾಂಡ್ ಅವಕಾಶ ನೀಡದೇ, ವರುಣಾ ಕ್ಷೇತ್ರ ಫೈನಲ್ ಮಾಡಿತು. ಇದೀಗ ಸಿದ್ದರಾಮಯ್ಯ ಬಂದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದ ಶ್ರೀನಿವಾಸ ಗೌಡ ಅತಂತ್ರರಾಗಿದ್ದಾರೆ. ಅತ್ತ ತಮಗೂ ಟಿಕೆಟ್ ಸಿಗದೇ, ಇತ್ತ ಸಿದ್ದರಾಮಯ್ಯನೂ ಬರದೆ ಕಂಗಾಲಾಗಿದ್ದಾರೆ. ಅವರ ರಾಜಕೀಯ ಭವಿಷ್ಯವೇ ಮುಗಿದಂತಾಗಿದೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿ ಶಾಸಕರಾಗಿ, ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯದರೆ, ತಾನೇ ಕೋಲಾರದ ಉಸ್ತುವಾರಿ ಎಂದು ಬೀಗಿದ್ದ ಶ್ರೀನಿವಾಸ ಗೌಡಗೆ ರಾಜಕೀಯವಾಗಿ ಭಾರೀ ಹಿನ್ನಡೆ ಎಂದು ಹೇಳಬಹುದು. ಹಾಲಿ ಶಾಸಕನಾಗಿದ್ದಾಗಲೇ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರೂ ಯಾವ ಪ್ರಯೋಜನವಾಗಿಲ್ಲ.
ಕೋಲಾರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ
ಇನ್ನು ಮೊದಲರೆಡು ಕಾಂಗ್ರೆಸ್ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಹೆಸರಿಸದೆ ಬಾಕಿ ಉಳಿಸಿಕೊಂಡಿದ್ದ ಹೈಕಮಾಂಡ್, ಮೂರನೇ ಪಟ್ಟಿಯಲ್ಲಿ ಪಕ್ಕದ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ಗೆ ಕೋಲಾರ ಟಿಕೆಟ್ ನೀಡಿದೆ.
ಇದೀಗ ಕೋಲಾರ ಚುನಾವಣಾ ಕಣದಲ್ಲಿ ಬಿಜೆಪಿಯಿಂದ ವರ್ತೂರು ಪ್ರಕಾಶ್, ಜೆಡಿಎಸ್‌ನಿಂದ ಸಿಎಂಆರ್ ಶ್ರೀನಾಥ್ ಮತ್ತು ಕಾಂಗ್ರೆಸ್‌ನಿಂದ ಕೊತ್ತೂರು ಮಂಜುನಾಥ್ ಇದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನಾವಾಗಿದೆ.












Click it and Unblock the Notifications