ಕೋಲಾರದಲ್ಲಿ ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿದ ಶಿಕ್ಷಣ ಸಚಿವರು
ಕೋಲಾರ, ಫೆಬ್ರವರಿ 05: ಕೋಲಾರದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಕುಳಿತು ನೆಲದ ಮೇಲೆ ಕುಳಿತು ಊಟ ಮಾಡಿದರು.
ಬರಪೀಡಿತ ಜಿಲ್ಲೆ ಎಂದೇ ಹೆಸರುವಾಸಿಯಾಗಿರುವ ಈ ಭಾಗದ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಕಳೆದ ಅಕ್ಟೋಬರ್ ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ಸಿರಿಧಾನ್ಯಯುಕ್ತ ಬಿಸಿಯೂಟ ಕಾರ್ಯಕ್ರಮವು ಹತ್ತು ವಾರಗಳಲ್ಲಿ ನಿಂತಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದ ಸಿರಿಧಾನ್ಯಯುಕ್ತ ಖಾದ್ಯ ಭೋಜನವನ್ನು ಮತ್ತೆ ಶುರು ಮಾಡುವಂತೆ ಪೋಷಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ವತಃ ಶಿಕ್ಷಣ ಸಚಿವರೇ ಶಾಲೆಗೆ ಭೇಟಿ ಕೊಟ್ಟು ಮಾಹಿತಿ ಪಡೆದಿದ್ದಾರೆ. ಈ ಸಂದರ್ಭ ಮಕ್ಕಳೊಂದಿಗೆ ಕುಳಿತು ಊಟ ಮಾಡಿ ಬಿಸಿಯೂಟವನ್ನೂ ಪರಿಶೀಲಿಸಿದ್ದಾರೆ. ಪಾಯಸ, ಹೆಸರು ಬೇಳೆ ಪಲ್ಯ, ಕಾಳು ಸಾರು, ಅನ್ನ ಸವಿದಿದ್ದಾರೆ.

ಕೋಲಾರ ತಾಲೂಕಿನ ವಡಗೂರು, ಟಮಕ, ಕಾಳಹಸ್ತಿಪುರ ಮತ್ತು ಕುಂಬಾರಹಳ್ಳಿಗಳ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯು ಸಿರಿಧಾನ್ಯಯುಕ್ತ ಬಿಸಿಯೂಟ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ಹತ್ತು ವಾರಗಳ ಈ ಪ್ರಾಯೋಗಿಕ ಕಾರ್ಯಕ್ರಮವು ಡಿಸೆಂಬರ್ ವೇಳೆಗೆ ಮುಕ್ತಾಯವಾಗಿದೆ. ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರಕ್ಕೊಮ್ಮೆ ಸಿರಿಧಾನ್ಯಯುಕ್ತ ಖಾದ್ಯವನ್ನು ಕೊಡುವುದು ಇಲ್ಲಿ ನಡೆದಿತ್ತು. ಇಲ್ಲಿನ ಪ್ರಾಯೋಗಿಕ ಕಾರ್ಯಕ್ರಮದ ಸಾಧಕ-ಬಾಧಕಗಳನ್ನು ಆಧರಿಸಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಿಗೆ ವಿಸ್ತರಿಸುವುದು ಸರ್ಕಾರದ ಉದ್ದೇಶವಾಗಿತ್ತು.

ಕಳೆದ ತಿಂಗಳು ಈ ಶಾಲೆಗಳಿಗೆ ಭೇಟಿ ಕೊಟ್ಟಿದ್ದ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸಿರಿಧಾನ್ಯಯುಕ್ತ ಖಾದ್ಯಗಳ ಸೇವನೆಯ ಪ್ರಯೋಜನದ ಬಗ್ಗೆ ಶಿಕ್ಣಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಹಾಗಾಗಿ ಇಂದು ಸಚಿವರೇ ಕೋಲಾರ ತಾಲೂಕಿನ ವಡಗೂರಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆಯಲ್ಲಿ ಮಾಹಿತಿ ಪಡೆದುಕೊಂಡರು. ಈ ಯೋಜನೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮುಂದುವರೆಸಲು ತೀರ್ಮಾನಿಸುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications