ಕಮಲ ಕೆರೆಯಲ್ಲಿ-ತೆನೆ ಹೊಲದಲ್ಲಿರಬೇಕು: ದಾನ ಧರ್ಮದ ಕೈ ಅಧಿಕಾರದಲ್ಲಿರಬೇಕು: ಡಿಕೆ ಶಿವಕುಮಾರ್ ಟಾಂಗ್
ಬೆಂಗಳೂರು, ಏಪ್ರಿಲ್ 16: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ಪರ್ಧಿಸುವ ಚಿನ್ನದ ನಾಡು ಕೋಲಾರದಲ್ಲಿ ಕಾಂಗ್ರೆಸ್ ಭರ್ಜರಿ ಮತಪ್ರಚಾರವನ್ನು ಭಾನುವಾರ ನಡೆಸಿತು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್‌ನ ಭವಿಷ್ಯ ಯೋಜನೆ ಕುರಿತು ಪ್ರಸ್ತಾಪಿಸಿದರು.
ಕೋಲಾರದ ಭರ್ಜರಿ ಪ್ರಚಾರ ವೇದಿಕೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಸತ್ಯವನ್ನು ಉಳಿಸಬೇಕಿದೆ. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಬದುಕಿಲ್ಲ ಎಂಬ ಸಂದೇಶ ಸಾರಲು ನಮ್ಮ ನಾಯಕರು ಇಲ್ಲಿ ಬಂದು ಹೋರಾಟ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಸತ್ಯ ನುಡಿದ ಜಾಗದಲ್ಲಿ ಈ ಸಮಾವೇಶ ಮಾಡಲಾಗುತ್ತಿದೆ. ನಾವೆಲ್ಲರೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬಬೇಕು ಎಂದು ಅವರು ಕರೆ ನೀಡಿದರು.

ಮುಂದಿನ ತಿಂಗಳು ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ದಿನ ಮಾತ್ರವಲ್ಲ. ರಾಜ್ಯದಲ್ಲಿ ಬದಲಾವಣೆ ತರುವ ದಿನ. ಭ್ರಷ್ಟ ಬಿಜೆಪಿ ಸರ್ಕಾರ ಬಡಿದೋಡಿಸುವ ದಿನ, ನಿಮ್ಮ ಭವಿಷ್ಯ ಬರೆಯುವ ದಿನ, ಜನರ ಸಮಸ್ಯೆಗಳಿಗೆ ಮುಕ್ತಿ ನೀಡುವ ದಿನ, ರಾಜ್ಯವನ್ನು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಸುವ ದಿನ ಎಂದು ಬಣ್ಣಿಸಿದರು.
ಕರ್ನಾಟಕ ರಾಜ್ಯದ ಸ್ವಾಭಿಮಾನ ಉಳಿಸುವ ದಿನ ಮೇ 10. ಗೃಹಜ್ಯೋತಿ, ಗೃಹಲಕ್ಷ್ಮಿ ಉಳಿಸುವ ದಿನ, ಬಡವರಿಗೆ ಅನ್ನಭಾಗ್ಯ ನೀಡುವ ದಿನ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ದಿನ ಎಂದು ಕಾಂಗ್ರೆಸ್ ಸರ್ಕಾರ ಈ ಹಿಂದೆ ತಂದಿರುವ
ಯೋಜನೆಗಳು ಹಾಗೂ ಮುಂದಿನ ಯೋಜನೆಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಾನ ಧರ್ಮದ 'ಕೈ' ಅಧಿಕಾರದಲ್ಲಿರಬೇಕು: ಡಿಕೆಶಿ
'ಕಮಲ' (ಬಿಜೆಪಿ) ಕೆರೆಯಲ್ಲಿದ್ದರೆ ಚೆಂದ, ತೆನೆ (ಜೆಡಿಎಸ್) ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದೇ ರೀತಿ ಇಂದು ಕಾಂಗ್ರೆಸ್ ಪಕ್ಷ ಜನರಿಗೆ ಬೆಲೆ ಏರಿಕೆಯಿಂದ ಮುಕ್ತಿ ನೀಡಲು ನಾಲ್ಕು ಗ್ಯಾರಂಟಿ ಯೋಜನೆ ನೀಡಿದೆ. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರ ಹಣ ಉಳಿತಾಯ ಮಾಡಬಹುದಾಗಿದೆ. ಈ ಯೋಜನೆಯ ಗ್ಯಾರಂಟಿ ಕಾರ್ಡ್ ಗೆ ನಾನು ಸಿದ್ದರಾಮಯ್ಯ ಅವರು ಸಹಿ ಹಾಕಿದ್ದು, ಅಧಿಕಾರಕ್ಕೆ ಬಂದ ಮೊದಲ ದಿನ ನಾವು ಈ ಯೋಜನೆ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಏನಾಗುತ್ತಿದೆ ಎಂದು ನೀವು ನೋಡುತ್ತಿದ್ದೀರಾ. 47 ಜನ ಬಿಜೆಪಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿದ್ದಾರೆ. ಯಾರೆಲ್ಲಾ ಪಕ್ಷ ಸೇರುತ್ತಾರೆ ಎಂದು ಮುಂದೆ ಮಾತನಾಡುತ್ತೇನೆ ಎಂದು ಬಿಜೆಪಿ ಆಡಳಿತವನ್ನು ಟೀಕಿಸಿದರು.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕದ ಬ್ಯಾಂಕುಗಳನ್ನು ನುಂಗಿ ನೀರು ಕುಡಿದು ಬಿಜೆಪಿ ಇದೀಗ ಹೆಮ್ಮೆಯ ನಂದಿನಿ ಸಂಸ್ಥೆ ನುಂಗಲು ಹೊರಟಿದೆ. ರಾಜ್ಯದಲ್ಲಿ ಹಾಲು ಒಕ್ಕೂಟಗಳನ್ನು ಸಂಘಟಿಸಿ ದಿನಕ್ಕೆ 99 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಬೆಂಗಳೂರು ಮತ್ತು ಬೇರೆ ಬೇರೆ ನಗರಗಳಲ್ಲಿ ಮಾರುವ ವ್ಯವಸ್ಥೆ ಕಲ್ಪಿಸಲಾಗಿದೆ. ಲಕ್ಷಾಂತರ ರೈತರು ಹಾಲು ಉತ್ಪಾದಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಮಿತ್ ಶಾ ಅವರು ಕೇಂದ್ರ ಸಹಕಾರಿ ಮಂತ್ರಿಯಾದ ನಂತರ ನಂದಿನಿಯನ್ನು ಅಮೂಲ್ ಜತೆ ವಿಲೀನಕ್ಕೆ ಮುಂದಾಗಿದ್ದರು. ಈಗ ಅಮೂಲ್ ಸಂಸ್ಥೆಯ ಹಾಲನ್ನು ರಾಜ್ಯದ ಮಾರುಕಟ್ಟೆಗೆ ಕರೆತಂದು ನಂದಿನಿ ಉತ್ಪನ್ನಗಳ ಜತೆ ಸ್ಪರ್ಧೆಗಿಳಿಸಿದ್ದಾರೆ ಎಂದು ಅವರು ಹರಿಹಾಯ್ದರು.












Click it and Unblock the Notifications