ಮಗು ದತ್ತು ಕೇಳಿದ ತಮ್ಮ, ಒಪ್ಪದ ಅಣ್ಣನನ್ನು ಕೊಂದು ಸುಟ್ಟ!
ಕೋಲಾರ, ಜನವರಿ 28; ಆಟೋದಲ್ಲಿ ಅಪರಿಚಿತ ವ್ಯಕ್ತಿಯ ಶವ ಸುಟ್ಟು ಕರಕಲಾಗಿರುವ ಘಟನೆ ಕೋಲಾರದಲ್ಲಿ ಜನವರಿ 23ರ ಬೆಳಗ್ಗೆ ನಡೆದಿತ್ತು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರೂ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ಕಾರಣ ಶವದ ಗುರುತು ಪತ್ತೆಯಾಗಿರಲಿಲ್ಲ.
ಪ್ರಕರಣದ ತನಿಖೆ ನಡೆಸಿದ ಬಂಗಾರಪೇಟೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಕೊಲೆಯಾದ ವ್ಯಕ್ತಿ ಅಪ್ಪು ಅಲಿಯಾಸ್ ರಮೇಶ್ ಎಂದು ಗುರುತಿಸಲಾಗಿದೆ. ಬಂಗಾರಪೇಟೆಯ ಗಂಗಮ್ಮನಪಾಳ್ಯ ನಿವಾಸಿ ಅಪ್ಪು ಅವನ್ನು ಸ್ವಂತ ತಮ್ಮ ರಾಜೇಶ್ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.
ಮೃತ ರಮೇಶ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. 23/01/2021 ರಂದು ಬೆಳಗ್ಗೆ 7.30ರ ಸುಮಾರಿಗೆ ಮಲ್ಲಯ್ಯನಗುರ್ಕಿ ಗ್ರಾಮದ ಇಟ್ಟಿಗೆ ಫ್ಯಾಕ್ಟರಿ ಬಳಿ ಇರುವ ರೈಲ್ವೆ ಅಂಡರ್‌ಪಾಸ್ ಸಮೀಪ ಆಟೋ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು, ಹತ್ತಿರ ಹೋಗಿ ನೋಡಿದಾಗ ಆಟೋದಲ್ಲಿ ವ್ಯಕ್ತಿಯ ಶವ ಸುಟ್ಟು ಕರಕಲಾಗಿರುವುದು ಕಂಡಿ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ಮಕ್ಕಳಿಗಾಗಿ ಕೊಲೆ; ಮೃತ ರಮೇಶ್ ಮತ್ತು ಕೊಲೆ ಮಾಡಿರುವ ರಾಜೇಶ್ ಅಣ್ಣ-ತಮ್ಮ. ರಾಜೇಶ್‌ಗೆ ಮಕ್ಕಳಾಗಿರಲಿಲ್ಲ. ಅಣ್ಣ ರಮೇಶ್‌ಗೆ ಇಬ್ಬರು ಮಕ್ಕಳಿದ್ದರು. ಮಗುವನ್ನು ದತ್ತು ನೀಡುವಂತೆ ರಾಜೇಶ್ ಕೇಳಿದ್ದನು. ರಮೇಶ್ ಇದಕ್ಕೆ ಒಪ್ಪಿರಲಿಲ್ಲ. ಈ ಕುರಿತು ಹಲವು ಬಾರಿ ಇಬ್ಬರ ನಡುವೆ ಜಗಳವಾಗಿತ್ತು.
ಕೆಲವು ದಿನಗಳ ಹಿಂದೆಯೂ ಮಕ್ಕಳ ದತ್ತು ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಆಗ ರಾಜೇಶ್ ರಮೇಶ್ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಸ್ನೇಹಿತ ಅಜಯ್ ಸಹಾಯದಿಂದ ಶವವನ್ನು ಆಟೋದಲ್ಲಿ ಹಾಕಿಕೊಂಡು ಬಂದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

ಕೊಲೆ ಮಾಡಿದ ಆರೋಪಿ ರಾಜೇಶ್ ಮತ್ತು ಆತನಿಗೆ ಸಹಾಯ ಮಾಡಿದ ಅಜಯ್‌ನನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅಪರಿಚಿತ ವ್ಯಕ್ತಿಯ ಶವ ಸುಟ್ಟುಕರಕಲಾದ ರೀತಿಯಲ್ಲಿ ಪತ್ತೆಯಾದ ಪ್ರಕರಣ ಇತ್ಯರ್ಥವಾಗಿದೆ.












Click it and Unblock the Notifications