ಕೋಲಾರದಲ್ಲಿ 75 ಲಕ್ಷ ರೂಪಾಯಿ ವೆಚ್ಚದ ರಸ್ತೆ ಆಯಸ್ಸು ಬರೀ 20 ದಿವಸ!
ಕೋಲಾರ, ಮೇ 31: ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮಿಲಾಗಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿರುವ ಎಷ್ಟೋ ಉದಾಹರಣೆಗಳು ಸಿಗುತ್ತವೆ. ಜನರ ಹೆಸರಿನಲ್ಲಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಂಗತಿ ನಡೆಯುತ್ತಲೇ ಇದೆ. ಕೋಲಾರದಲ್ಲೂ ಅಂಥದ್ದೇ ಒಂದು ನಿದರ್ಶನ ದೊರೆತಿದೆ. 75 ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯ ಈಗಿನ ಸ್ಥಿತಿಯೇ ಇದಕ್ಕೆ ಸಾಕ್ಷಿಯಾಗಿದೆ.
Recommended Video
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಹುಲ್ಕೂರು-ಹಂಗಳ ಗ್ರಾಮದ ರಸ್ತೆ ಕಾಮಗಾರಿ ನಡೆಸಿ ಕೇವಲ ಇಪ್ಪತ್ತೇ ದಿನಕ್ಕೆ ಡಾಂಬರು ಕಿತ್ತು ಬಂದಿದ್ದು, ಈ ಕಾಮಗಾರಿಯ ಗುಣಮಟ್ಟವನ್ನು ಎತ್ತಿ ತೋರಿಸುತ್ತಿದೆ. ಈ ಕುರಿತ ಸಂಪೂರ್ಣ ವಿವರ ಮುಂದಿದೆ...

2.4 ಕಿಲೋ ಮೀಟರ್ ರಸ್ತೆಗೆ ನಡೆದಿದ್ದ ಕಾಮಗಾರಿ
ಇತ್ತೀಚೆಗೆ ನಬಾರ್ಡ್ ನಿಧಿಯಿಂದ 2.4 ಕಿಲೋ ಮೀಟರ್ ರಸ್ತೆಗೆ 75 ಲಕ್ಷ ವೆಚ್ಚದ ಲೆಕ್ಕದಲ್ಲಿ ರಸ್ತೆ ಕಾಮಗಾರಿ ನಡೆಸಿ ಡಾಂಬರು ಹಾಕಲಾಗಿತ್ತು. ಇದಕ್ಕೆ ಸ್ಥಳೀಯ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು. ಗುತ್ತಿಗೆದಾರರು 75 ಲಕ್ಷ ವೆಚ್ಚದ ಕಾಮಗಾರಿಯನ್ನು ಕೇವಲ 20 ಲಕ್ಷಕ್ಕೆ ಮಾಡಿ ಮುಗಿಸಿದ್ದಾರೆ.

ಇಪ್ಪತ್ತೇ ದಿನಕ್ಕೆ ಕಿತ್ತು ಬಂದ ರಸ್ತೆ
ಡಾಂಬರೀಕರಣ ಮಾಡಿದ 20 ದಿನಕ್ಕೇ ರಸ್ತೆಯಲ್ಲಿ ಡಾಂಬರು ಬೆರಣಿಯಂತೆ ಕಿತ್ತು ಬರುತ್ತಿದೆ. ಈ ಗುಣಮಟ್ಟದ ರಸ್ತೆ, ಅಡ್ಡ ಸೇತುವೆ ಕಟ್ಟಡವನ್ನು ಸ್ಥಳೀಯರು ಕಂಡು ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣ ಲೂಟಿ ಮಾಡಲು ತೆಳುವಾಗಿ ಡಾಂಬರು ಹಾಕಿ ಕಾಮಗಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳಪೆ ಕಾಮಗಾರಿ ಎಂದು ಆಕ್ರೋಶಗೊಂಡ ಜನ
ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಗುತ್ತಿಗೆದಾರ ಅಶೋಕ್ ನಾರಾಯಣ್ ಹಾಗೂ ಇಂಜಿನಿಯರ್ ಶೇಷಾದ್ರಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಡಾಂಬರೀಕರಣ ಕೆಲಸ ಮುಗಿಸಿದ 20 ದಿನಕ್ಕೆ ಕಿತ್ತು ಬಂದಿದೆ. ಇಷ್ಟು ಕಳಪೆಯಾಗಿ ಕಾಮಗಾರಿ ನಡೆಸಿದ್ದೀರಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮತ್ತೆ ರಸ್ತೆ ಸರಿಪಡಿಸುವ ಭರವಸೆ ಕೊಟ್ಟ ಗುತ್ತಿಗೆದಾರ
ರಸ್ತೆಯನ್ನು ಕೂಡಲೇ ಹೊಸದಾಗಿ ಜೆಲ್ಲಿ ಬೆಡ್ ಹಾಕಿ ಗುಣಮಟ್ಟದ ಡಾಂಬರೀಕರಣ ಮಾಡಬೇಕೆಂದು ಜನ ಒತ್ತಾಯಿಸಿದ್ದಾರೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಆದರೆ ಗ್ರಾಮಸ್ಥರ ಆಕ್ರೋಶ ಕಂಡು ಗುತ್ತಿಗೆದಾರ ಹಾಗೂ ಇಂಜಿನಿಯರ್, ಕೆಲವೇ ದಿನಗಳಲ್ಲಿ ರಸ್ತೆ ಸರಿಪಡಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications