ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ: ಗುಂಪುಗಾರಿಕೆಗೆ ಆಹ್ವಾನ?
ಕಾರವಾರ, ಡಿಸೆಂಬರ್ 13: ಕಾಂಗ್ರೆಸ್ ಪಕ್ಷ ತನ್ನ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುತ್ತಿದೆ. ಆದರೆ ಪಕ್ಷ ನಡೆಸುವ ಚುನಾವಣೆಯಿಂದ ಪಕ್ಷದೊಳಗಿನ ಗುಂಪುಗಾರಿಕೆಗೆ ಕಾಂಗ್ರೆಸ್ ತಾನೇ ಆಹ್ವಾನ ಮಾಡಿಕೊಂಡಂತಾಗಿದೆ ಎನ್ನುವ ಮಾತು ಇದೀಗ ಪಕ್ಷದೊಳಗೆ ಕೇಳಿ ಬಂದಿದೆ.
ಕಾಂಗ್ರೆಸ್ ತನ್ನ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ಘಟಕದ ಪದಾಧಿಕಾರಿಗಳ ಆಯ್ಕೆಗೆ ಕೆಲ ವರ್ಷಗಳಿಂದ ಚುನಾವಣೆ ನಡೆಸುತ್ತಿದೆ. ಪ್ರತಿ ರಾಜ್ಯದಲ್ಲೂ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಲಾಗುತ್ತದೆ. ಅದರಂತೆ ಸದ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, 36 ವರ್ಷದ ಒಳಗಿನ ಯುವಕರು ಈ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿ ತಮ್ಮ ಪರ ಮತ ಹಾಕಿಸಿಕೊಂಡು ಗೆಲ್ಲುವ ತಂತ್ರಗಾರಿಕೆ ಮಾಡುತ್ತಿದ್ದಾರೆ.

ಪಕ್ಷದೊಳಗೆ ಜಿದ್ದಾಜಿದ್ದಿನ ಪೈಪೋಟಿ
ಮೇಲ್ನೋಟಕ್ಕೆ ಇದು ಸಂಘಟನೆಯ ಬಲವರ್ಧನೆ ಎಂದೇ ಹೇಳಲಾದರೂ, ಪಕ್ಷದೊಳಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಗುಂಪುಗಾರಿಕೆ ಮಾಡಲು ಬಹಿರಂಗವಾಗಿ ಆಹ್ವಾನ ಮಾಡಿದಂತಾಗಿದೆ. ಪಕ್ಷದೊಳಗೆ ಸೋಲು-ಗೆಲುವಿನಿಂದ ದ್ವೇಷದ ರಾಜಕೀಯ ಮಾಡುವಂತಾಗಿದ್ದು, ಬಲಿಷ್ಠರು ಯಾರು ಎಂದು ಪ್ರದರ್ಶಿಸಲು ಪಕ್ಷದೊಳಗೆ ಜಿದ್ದಾಜಿದ್ದಿನ ಪೈಪೋಟಿ ಚುನಾವಣೆಯಿಂದ ಮಾಡುವಂತಾಗಿದೆ.

ಪರ್ಯಾಯ ಅಭ್ಯರ್ಥಿಯ ಹುಡುಕಾಟ
ಉತ್ತರ ಕನ್ನಡ ಜಿಲ್ಲೆಯಲ್ಲೂ ಸದ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ಕಣ ರಂಗೇರಿದೆ. ಕಳೆದ ಬಾರಿ ನಿವೇದಿತ್ ಆಳ್ವ ಬಣದಲ್ಲಿ ಗುರುತಿಸಿಕೊಂಡಿದ್ದ ಸಂತೋಷ್ ಶೆಟ್ಟಿ ಹಾಗೂ ಭೀಮಣ್ಣ ನಾಯ್ಕರ ಜೊತೆ ಗುರುತಿಸಿಕೊಂಡಿದ್ದ ರಾಘವೇಂದ್ರ ನಾಯ್ಕ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆದಿತ್ತು. ಚುನಾವಣೆಯಲ್ಲಿ ಸಂತೋಷ್ ಶೆಟ್ಟಿ ಗೆಲುವನ್ನು ಸಾಧಿಸಿದ್ದರು. ಈ ಬಾರಿ ಸಂತೋಷ್ ಶೆಟ್ಟಿ ಮತ್ತೊಮ್ಮೆ ಕಣಕ್ಕೆ ಇಳಿದಿದ್ದರೆ, ಇತ್ತ ಅವರ ವಿರೋಧಿ ಬಣಗಳು ಈ ಬಾರಿ ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪ್ರಯತ್ನಕ್ಕೆ ಇಳಿದಿದ್ದಾರೆ. ಹೀಗಾಗಿ ಪರ್ಯಾಯ ಅಭ್ಯರ್ಥಿಯ ಹುಡುಕಾಟವನ್ನು ನಡೆಸಿದ್ದಾರೆ ಎನ್ನಲಾಗಿದೆ.

ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಓಡಾಟ
ಹಾಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಪರ ಈ ಬಾರಿ ಶಿರಸಿ-ಸಿದ್ದಾಪುರ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಸುಷ್ಮಾ ರಾಜಗೋಪಾಲ ಕೆಲಸ ಮಾಡುತ್ತಿದ್ದು, ಶೆಟ್ಟಿ ಗೆಲುವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಓಡಾಟ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಈ ಬಾರಿ ಜಿಲ್ಲೆಯಲ್ಲಿ 6000ಕ್ಕೂ ಅಧಿಕ ಮತದಾರರು ಮತದಾನದ ಹಕ್ಕನ್ನು ಪಡೆದಿದ್ದಾರೆ ಎನ್ನಲಾಗಿದ್ದು, ಹಳಿಯಾಳ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಮತದಾರರನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಪುತ್ರ ಶ್ರೀನಿವಾಸ್ ಘೋಟ್ನೇಕರ್ ಮಾಡಿಸಿದ್ದಾರೆ. ಅವರು ಕೂಡ ಜಿಲ್ಲಾಧ್ಯಕ್ಷ ಸ್ಥಾನದ ಹುರಿಯಾಳಾಗುವ ಸಾಧ್ಯತೆ ಇದೆ ಎನ್ನುವ ಮಾತು ಸಹ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ
ಇನ್ನು ತಾಲೂಕು ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯುತ್ತಿದ್ದು, ಅಲ್ಲೂ ಸಹ ಕೆಲ ತಾಲೂಕಿನಲ್ಲಿ ಪಕ್ಷದ ಒಳಗೇ ನಾಯಕತ್ವಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿರುವುದರಿಂದ ಗುಂಪುಗಾರಿಕೆಗೆ ಕಾರಣವಾಗಿದೆ. ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸುತ್ತಿದ್ದು, ಇದರ ನಡುವೆ ಯುವ ಕಾಂಗ್ರೆಸ್ ಚುನಾವಣೆ ಪಕ್ಷ ಸಂಘಟನೆಗಿಂತ ಗುಂಪುಗಾರಿಕೆಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟು ಪಕ್ಷಕ್ಕೆ ಇನ್ನಷ್ಟು ಹಿನ್ನಡೆಯಾಗಲು ಕಾರಣವಾಗುತ್ತಿದೆ ಎನ್ನುವುದು ಕೆಲ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಜಿಲ್ಲೆಯ ನಾಯಕರುಗಳಿಗೆ ಬೇಡವಾದ ಚುನಾವಣೆ
ಸದ್ಯ ನಡೆಯುತ್ತಿರುವ ಯುವ ಕಾಂಗ್ರೆಸ್ ಚುನಾವಣೆ ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕರುಗಳಿಗೂ ಬೇಡವಾದಂತಾಗಿದೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆಯಾಗಲಿ, ಮಾಜಿ ಶಾಸಕರುಗಳಾದ ಸತೀಶ್ ಸೈಲ್, ಮಂಕಾಳ ವೈದ್ಯ, ಶಾರದಾ ಶೆಟ್ಟಿ ಸೇರಿದಂತೆ ಯಾವ ನಾಯಕರುಗಳೂ ಈ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿಲ್ಲ.

ಚುನಾವಣೆಯ ಅಗತ್ಯ ಇದೆಯೇ
ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡುವ ಸದಸ್ಯರನ್ನು ನೋಂದಣಿ ಮಾಡಿಸಲಾಗಿದೆ. ಆದರೆ, ಇದರಲ್ಲಿ ಹಳಿಯಾಳ ಕ್ಷೇತ್ರದಿಂದ ಶ್ರೀನಿವಾಸ್ ಘೋಟ್ನೇಕರ್ ಹೊರತುಪಡಿಸಿ ಉಳಿದ ಯಾವ ಕ್ಷೇತ್ರದಲ್ಲೂ ನಾಯಕರುಗಳು ಹೆಚ್ಚಿನ ಆಸಕ್ತಿಯಿಂದ ಸದಸ್ಯತ್ವವನ್ನು ಮಾಡಿಸಿಲ್ಲ. ಹಲವು ನಾಯಕರುಗಳಿಗೆ ಚುನಾವಣೆಯ ಪ್ರಕ್ರಿಯೆಗಳ ಬಗ್ಗೆಯೇ ತಿಳಿದಿಲ್ಲ ಎನ್ನಲಾಗಿದೆ. ತಾಲೂಕು ಮಟ್ಟದಲ್ಲೂ ತಮ್ಮ ಕಾರ್ಯಕರ್ತರಿಗೆ ಪಕ್ಷದಲ್ಲಿ ಹುದ್ದೆ ಕೊಡಿಸಲು ಆಸಕ್ತಿ ವಹಿಸದೇ ಇದ್ದಾರೆ. ಚುನಾವಣೆಯ ಅಗತ್ಯವಾದರೂ ಇದೆಯೇ ಎನ್ನುವ ಮಾತು ಸಹ ಪಕ್ಷದ ಕಾರ್ಯಕರ್ತರಿಂದಲೇ ಕೇಳಿ ಬಂದಿದೆ ಎನ್ನಲಾಗಿದೆ. ಈ ಬಾರಿಯಾದರೂ ಪಕ್ಷ ಸಂಘಟನೆ ದೃಷ್ಟಿಯಿಂದ ದೇಶಪಾಂಡೆ ನೇತೃತ್ವದಲ್ಲಿ ಪಕ್ಷದ ನಾಯಕರು ಸಭೆ ನಡೆಸಿ ಚುನಾವಣೆಯಲ್ಲಿ ಗುಂಪುಗಾರಿಕೆ ಆಗದಂತೆ ಓರ್ವರಿಗೆ ಬೆಂಬಲಿಸಿ ಆಯ್ಕೆ ಮಾಡಬೇಕು ಎನ್ನುವುದು ಕೆಲ ಕಾರ್ಯಕರ್ತರ ಅಭಿಪ್ರಾಯವಾಗಿದೆ.












Click it and Unblock the Notifications