ಪ್ರಿಯಕರನ ಹುಡುಕಿಕೊಡಿಯೆಂದು ಪೊಲೀಸರನ್ನು ಕಾಡಿದ ಯುವಕ
ಕಾರವಾರ, ಮೇ 22 : "ನನ್ನ ಪ್ರಿಯಕರನನ್ನು ಹುಡುಕಿಕೊಡಿ. ಆತ ನನ್ನ ಪ್ರೀತಿಸುತ್ತಿದ್ದಾನೋ ಇಲ್ಲವೋ ಎನ್ನುವುದು ಅವನಿಂದ ಹೇಳಿಸಿ" ಎಂದು ಮಹಿಳೆಯ ವೇಷ ತೊಟ್ಟು, ಯುವಕನೇ ಇನ್ನೊಬ್ಬ ಯುವಕನ ಹುಡುಕಾಟಕ್ಕೆ ಪೊಲೀಸರ ಬಳಿ ಬೇಡಿಕೆ ಇಟ್ಟ ಘಟನೆ ಕಾರವಾರದ ನಗರ ಠಾಣೆಯಲ್ಲಿ ನಡೆದಿದೆ.
ಮೂಲತಃ ತುಮಕೂರು ಜಿಲ್ಲೆಯ ಪಾವಗಡದ ಎಂ.ಟೆಕ್ ಪದವೀಧರ ಯುವಕ ಇಲ್ಲಿಗೆ ಬಂದು ಬೇಡಿಕೆ ಇಟ್ಟವನು. ಈತ ಕಾರವಾರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ವ್ಯಾಸಂಗ ಮಾಡಿದ್ದಾನೆ. ಈ ವೇಳೆ ಈತನ ಜ್ಯೂನಿಯರ್ ಯುವಕನೊಂದಿಗೆ ರೂಮಿನಲ್ಲಿ ಉಳಿಯುತ್ತಿದ್ದರಂತೆ.
ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಏನು ನಡೆದಿದೆಯೋ ಗೊತ್ತಿಲ್ಲ. ಎಂ.ಟೆಕ್ ಪದವೀಧರನಿಗೆ ಜ್ಯೂನಿಯರ್ ನ ಮೇಲೆ ಪ್ರೀತಿ ಅರಳಿತ್ತಂತೆ. "ಬಿ.ಇ ವ್ಯಾಸಂಗ ಮಾಡುತ್ತಿದ್ದ ವೇಳೆ ಇಬ್ಬರು ಪ್ರೀತಿ ಮಾಡುತ್ತಿದ್ದೆವು. ಆತನಿಗೆ ಕಾಲೇಜು ಫೀಸ್ ಕಟ್ಟಲು ಹಣದ ಸಹಾಯ ಕೂಡ ಮಾಡಿದ್ದೆ" ಎನ್ನುತ್ತಾನೆ ಎಂ.ಟೆಕ್ ಪದವೀಧರ.

ಈ ಪದವೀಧರನ ವಿಚಿತ್ರ ವರ್ತನೆಯಿಂದಲೇ ಕಂಗೆಟ್ಟಿದ್ದ ಅವನ ಪಾಲಕರು ಸೋಮವಾರ ಕಾರವಾರ ನಗರ ಪೊಲೀಸ್ ಠಾಣೆಗೆ ಕರೆತಂದಿದ್ದರು. ತಮ್ಮ ಮಗನ ಈ ರೀತಿಯ ವರ್ತನೆಗೆ ಆ ಜ್ಯೂನಿಯರ್ ಯುವಕನೇ ಕಾರಣ ಎಂದು ಆರೋಪಿಸಿದರು. ಪಾಲಕರು ಹಾಗೂ ಅವನಲ್ಲ ಅವಳಂತಿದ್ದ ಯುವಕರ ಆರೋಪಗಳ ನಡುವೆ ಕಂಗೆಟ್ಟು ಪೊಲೀಸರು ತಲೆ ಕೆಡಿಸಿಕೊಂಡಿದ್ದರು.
ಬಹಳ ಹೊತ್ತು ನಡೆದ ಚರ್ಚೆಗಳ ನಂತರ ಅಂತೂ ಯುವಕ ಮತ್ತು ಆತನ ಪಾಲಕರಿಗೆ ಪೊಲೀಸರು ಬುದ್ಧಿವಾದ ಹೇಳಿದರು. ಆ ಜ್ಯೂನಿಯರ್ ಯುವಕ ಈಗ ಕಾರವಾರದಲ್ಲಿಲ್ಲ. ಅವನ ಊರು ರಾಮದುರ್ಗ. ಅಲ್ಲಿಯೇ ಹೋಗಿ ಕೇಳಿಕೊಳ್ಳಿ ಎಂದು ಕಳುಹಿಸಿದ್ದಾರೆ.
ಇನ್ನು ರಾಮದುರ್ಗಕ್ಕೆ ಹೋಗಿ, ಅಲ್ಲಿ ಮಾಹಿತಿ ಪಡೆದು ಮತ್ತೆ ಇಲ್ಲಿನ ನಗರ ಠಾಣೆಗೆ ಕರೆ ಮಾಡಿ ತಿಳಿಸುವುದಾಗಿಯೂ ಪದವೀಧರ ಯುವಕ ತಿಳಿಸಿ, ಕಾರವಾರದಿಂದ ಹೊರಟಿದ್ದಾನೆ.












Click it and Unblock the Notifications