ಯಲ್ಲಾಪುರ; ಕೊಲೆ ಮಾಡಿ ನಾಪತ್ತೆ ಎಂದು ಬಿಂಬಿಸಿದವರಿಗೆ ಕೋಳ!
ಕಾರವಾರ, ಜುಲೈ 09; ಆಕೆ ಗಂಡನನ್ನು ಕೊಲೆ ಮಾಡಿದ್ದಳು. ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣದ ತನಿಖೆ ನಡೆಸಿದ ಯಲ್ಲಾಪುರ ಪೊಲೀಸರು ಮಹಿಳೆ ಮತ್ತು ಆಕೆಯ ಮೂವರು ಸಂಬಂಧಿಕರನ್ನು ಬಂಧಿಸಿದ್ದಾರೆ.
ಚಿಕ್ಕ ಮಾವಳ್ಳಿ ನಿವಾಸಿ ಶ್ವೇತಾ ರಾಜೇಶ ನಾಯ್ಕ(29) ಕೊಲೆಯಾದ ವ್ಯಕ್ತಿಯ ಪತ್ನಿ. ಕೊಲೆಗೆ ಸಹಕಾರ ನೀಡಿದ ದೀಪಕ ಬುದ್ದಾ ಮರಾಠಿ (53), ಗಂಗಾಧರ ದೀಪಕ ಮರಾಠಿ (26), ಹಾಗೂ ಯಮುನಾ ದೀಪಕ ಮರಾಠಿ (50) ಇತರ ಆರೋಪಿಗಳು.
ಶ್ವೇತಾ ಪತಿ ರಾಜೇಶ ನಾರಾಯಣ ನಾಯ್ಕ 10/06/2021ರಂದು ಸಂಜೆ 7 ಗಂಟೆಗೆ ಮನೆಯಿಂದ ಹೋದವನು ಇವರೆಗೂ ಮನೆಗೆ ಬಂದಿಲ್ಲ ಎಂದು 14/06/2021ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದರು.

ಈ ಪ್ರಕರಣದಲ್ಲಿ ಪ್ರತ್ಯೇಕವಾಗಿ ಎರಡು ತಂಡವನ್ನು ರಚಿಸಿ ಕಾಣೆಯಾದ ರಾಜೇಶನ ಹೆಂಡತಿ ಹಾಗೂ ಅವರ ಕುಟುಂಬದ ಸದಸ್ಯರನ್ನು ತೀವ್ರವಾಗಿ ವಿಚಾರಣೆ ಒಳಪಡಿಸಲಾಗಿತ್ತು. ಕಾಣೆಯಾದ ರಾಜೇಶ ತನ್ನ ಹೆಂಡತಿ ಶ್ವೇತಾ ಜೊತೆ ಆಸ್ತಿ ವಿಚಾರವಾಗಿ ಆಗಾಗ ಜಗಳ ತೆಗೆದು ಹೊಡೆಯುತ್ತಿದ್ದದ್ದು ತಿಳಿದುಬಂದಿತ್ತು.
ಇದೇ ವಿಷಯದಲ್ಲಿ 10/06/2021ರಂದು ಚಿಕ್ಕ ಮಾವಳ್ಳಿಯ ತನ್ನ ಮಾವನ ಮನೆಯಲ್ಲಿ ರಾಜೇಶ ರಾತ್ರಿ ತನ್ನ ಹೆಂಡತಿ ಹಾಗೂ ಅತ್ತೆ, ಮಾವ, ಭಾವನೊಂದಿಗೆ ಜಗಳ ತೆಗೆದಿದ್ದಾನೆ. ಅದೇ ಸಿಟ್ಟಿನಿಂದ ಆರೋಪಿತರು ರಾಜೇಶನಿಗೆ ಗುದ್ದಲಿ ಹಾಗೂ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿ ಮೂಳೆಗಳನ್ನು ಕಾಡಿನಲ್ಲಿ ಎಸೆದಿದ್ದರು.
ಮೃತನ ಮೋಟಾರ್ ಸೈಕಲ್, ಮೊಬೈಲ್ ಹಾಗೂ ಚಪ್ಪಲಿಯನ್ನು ದೇಹಳ್ಳಿ ಗ್ರಾಮದ ಕಾಡಿನಲ್ಲಿ ಎಸೆದು ತನಿಖೆಯ ದಿಕ್ಕು ತಪ್ಪಿಸಲು ಬೇಟೆಗೆ ಹೋದಾಗ ಯಾವುದೋ ಪ್ರಾಣಿ ಆತನನ್ನು ತಿಂದಿರಬಹುದು ಎಂದು ನಂಬಿಸುವ ಉದ್ದೇಶ ಹೊಂದಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ, ಪೊಲೀಸ್ ಉಪಾಧೀಕ್ಷಕರಾದ ರವಿ ನಾಯ್ಕರವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರು ನೇತ್ರತ್ವದಲ್ಲಿ ಪ್ರಕರಣದ ತನಿಖೆ ನಡೆದಿತ್ತು.












Click it and Unblock the Notifications