ಅಕ್ರಮ ಪ್ರಕರಣಗಳ ನಿಯಂತ್ರಣಕ್ಕಾಗಿ ಸುವಿಧಾ ಮತ್ತು ಸಿ-ವಿಜಿಲ್ ಆ್ಯಪ್ ಬಿಡುಗಡೆ: ಈ ಬಗ್ಗೆ ಉತ್ತರ ಕನ್ನಡ DC ಹೇಳಿದ್ದೇನು?
ಕಾರವಾರ, ಏಪ್ರಿಲ್, 04: ಚುನಾವಣೆ ವೇಳೆ ಪಡೆಯಲೇಬೇಕಾದ ಅನುಮತಿಗಳಿಗೆ ಅನಗತ್ಯ ಓಡಾಟ ತಪ್ಪಿಸುವ ಮತ್ತು ಅಕ್ರಮ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಸುವಿಧಾ ಮತ್ತು ಸಿ-ವಿಜಿಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ವಿವಿಧ ಪಕ್ಷಗಳು ಪ್ರಚಾರ ಸಭೆಗಳನ್ನು ನಡೆಸಿ ಮತದಾರರ ಓಲೈಕೆಯಲ್ಲಿ ತೊಡಗಿವೆ. ಅಲ್ಲದೆ ಪ್ರಚಾರ, ಮೆರವಣಿಗೆ, ಸಭೆ ಸಮಾರಂಭಗಳ ಆಯೋಜನೆಗೆ ಪ್ಲ್ಯಾನ್ ರೂಪಿಸಿತ್ತಿದ್ದು, ಈ ಎಲ್ಲ ಕಾರ್ಯಗಳಿಗೂ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸುವವರು ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೆ ಜಾತ್ರೆ, ಸಾರ್ವಜನಿಕವಾಗಿ ನಡೆಯುವ ಇತರೆ ಸಮಾರಂಭಗಳಿಗೂ ಈ ಅನುಮತಿ ಕಡ್ಡಾಯವಾಗಿದೆ.

ಚುನಾವಣಾ ಪ್ರಚಾರಕ್ಕೆ ಅನುಮತಿ
ಆದರೆ ಇಂತಹ ಅನುಮತಿಯನ್ನು ಪಡೆಯಲು ಸಾರ್ವಜನಿಕರಿಗೆ ಹಾಗೂ ರಾಜಕೀಯ ಪಕ್ಷದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸುವಿಧಾ ತಂತ್ರಾಂಶದ ಆನ್ ಲೈನ್ ಅಪ್ಲಿಕೇಶನ್ ಜಾರಿ ಮಾಡಿದೆ. ಇದನ್ನು ಬಳಸಿಕೊಂಡು ಚುನಾವಣಾ ಪ್ರಚಾರಕ್ಕೆ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಳ್ಳಬಹುದಾಗಿದೆ.
48 ಗಂಟೆ ಮೊದಲು ಅರ್ಜಿ ಸಲ್ಲಿಸಬೇಕು
ಸುವಿಧಾ ತಂತ್ರಾಂಶದಲ್ಲಿ ರಾಜಕೀಯ ಪಕ್ಷ, ಪಕ್ಷದ ಅಭ್ಯರ್ಥಿ, ಏಜೆಂಟ್, ಕಾರ್ಯಕರ್ತ ಅಥವಾ ಇತರರು ತಮಗೆ ಬೇಕಿರುವ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಲು ಆನ್‌ಲೈನ್ ಮೂಲಕ 48 ಗಂಟೆ ಮೊದಲು ಈ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಯನ್ನು ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರ ಆಯಾ ಚುನಾವಣಾಧಿಕಾರಿಗಳು ಅನುಮತಿ ಪತ್ರ ನೀಡಲಿದ್ದಾರೆ.

ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದೇನು?
ಇನ್ನು ಚುನಾವಣಾ ಸಭೆ, ರ್‍ಯಾಲಿ, ಜಾಥಾ, ಪ್ರಚಾರ ಸಾಮಗ್ರಿ ಅಳವಡಿಕೆ, ವೇದಿಕೆ, ಮೈಕ್, ವಾಹನ, ಸಮಾರಂಭ ಮುಂತಾದ ರೀತಿಯ ಕಾರ್ಯಗಳಿಗೂ ಸುವಿಧಾದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಅನುಮತಿ ಪತ್ರವನ್ನು ಪಡೆಯಬಹುದಾಗಿದೆ. ವಿವಿಧ ರೀತಿಯ ಚುನಾವಣಾ ಪ್ರಚಾರ ಕಾರ್ಯ ಮತ್ತು ಅವುಗಳಿಗೆ ಸಂಬಂಧಿಸಿದಂತೆ ಮತಕ್ಷೇತ್ರ ವ್ಯಾಪ್ತಿಗೆ ಆಯಾ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದರು.
ಸಿ-ವಿಜಿಲ್ ಆ್ಯಪ್‌ನ ಉಪಯೋಗಗಳೇನು?
ಇನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಿರುವ ಚುನಾವಣಾ ಆಯೋಗ, ಇದೀಗ ಜನಸಮಾನ್ಯರು ತಮಗಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಗುಪ್ತವಾಗಿ ಹಾಗೂ ಸುಲಭವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಸಿ-ವಿಜಿಲ್ ತಂತ್ರಾಂಶ ಜಾರಿಗೆ ತಂದಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಬ್ಯಾನರ್, ಪೋಸ್ಟರ್‌ಗಳನ್ನು ತೆರವುಗೊಳಿಸದೇ ಇರುವುದು, ಹಣ ಹಂಚಿಕೆ, ಮದ್ಯ ಹಂಚಿಕೆ, ಸೀರೆ ಅಥವಾ ಉಚಿತ ಉಡುಗೊರೆಗಳನ್ನು ನೀಡುವುದು, ಅನುಮತಿ ಪಡೆಯದೇ ಸಭೆ ಸಮಾರಂಭಗಳನ್ನು ಆಯೋಜಿಸಿರುವ ಬಗ್ಗೆ ಮಾಹಿತಿಗಳು ಇದ್ದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸಿ-ವಿಜಿಲ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಫೋಟೋ, ವಿಡಿಯೋ ಅಥವಾ ಧ್ವನಿಮುದ್ರಿತ ಕ್ಲಿಪಿಂಗ್ಸ್‌ಗಳನ್ನು ಕಳುಹಿಸಬಹುದಾಗಿದೆ. ನಂತರ ದೂರನ್ನು ದಾಖಲಿಸಬಹುದಾಗಿರುತ್ತದೆ.
ಬಳಿಕ ಸಂಬಂಧಪಟ್ಟ ಚುನಾವಣಾಧಿಕಾರಿಗಳು ತುರ್ತಾಗಿ ಸ್ಥಳಕ್ಕೆ ಧಾವಿಸಿ ಸದರಿ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.












Click it and Unblock the Notifications