ಒಳ್ಳೆಯ ಕೆಲಸ ಮಾಡಿದ್ದಿದ್ರೆ ಸಿದ್ದರಾಮಯ್ಯನವರು ಕ್ಷೇತ್ರಕ್ಕಾಗಿ ಅಲೆದಾಡುತ್ತಿರಲಿಲ್ಲ: ಮುರುಗೇಶ್ ನಿರಾಣಿ ಟೀಕೆ
ಗೆದ್ದ ಕ್ಷೇತ್ರದಲ್ಲಿಯೇ ಒಳ್ಳೆಯ ಕೆಲಸ ಮಾಡಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೇರೆ ಕ್ಷೇತ್ರವನ್ನು ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಕಾರವಾರದಲ್ಲಿ ವ್ಯಂಗ್ಯವಾಡಿದರು.
ಕಾರವಾರ, ಮಾರ್ಚ್, 19: ಗೆದ್ದ ಕ್ಷೇತ್ರದಲ್ಲಿಯೇ ಒಳ್ಳೆಯ ಕೆಲಸ ಮಾಡಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೇರೆ ಕ್ಷೇತ್ರವನ್ನು ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಕಾರವಾರದಲ್ಲಿ ವ್ಯಂಗ್ಯವಾಡಿದರು.
ಕಾರವಾರದಲ್ಲಿ ಮಾತನಾಡಿದ ಅವರು, ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನನ್ನ ಪಾರ್ಟನರ್ ಸ್ಪರ್ಧಿಯಾಗಿದ್ದಾರೆ. ಬಾದಾಮಿ ತಾಲೂಕಿನ ಒಂದು ಭಾಗ ನನ್ನ ಕ್ಷೇತ್ರಕ್ಕೆ ಒಳಪಟ್ಟಿದ್ದು, ಅದು ಅವರು ಸ್ಪರ್ಧಿಸುವ ಕ್ಷೇತ್ರವಾಗಿದೆ. ಇದೀಗ ಕೋಲಾರದಲ್ಲೂ ಗೆಲ್ಲಲು ಸಾಧ್ಯವಿಲ್ಲ ಎಂದು ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿಯೂ ಸಹ ಅವರು ನಿಲ್ಲುವುದು ಗ್ಯಾರಂಟಿ ಇಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯನವರು ಬೇರೆಯವರ ಬಗ್ಗೆ ಟೀಕೆ ಮಾಡುವುದು ಬಿಡಲಿ. ಅವರು ಒಳ್ಳೆಯದನ್ನು ಮಾಡಿದ್ದರೆ ಈ ರೀತಿ ಬೇರೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬರುತ್ತಿರಲಿಲ್ಲ. ಸಿದ್ದರಾಮಯ್ಯನವರ ಬಗ್ಗೆ ಹೆಚ್ಚು ಹೇಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎನ್ನುವ ಮೂಲಕ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ.
ಇನ್ನು 2005ರಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಸಂಬಂಧ ಮೂಡಿಗೆರೆಯಲ್ಲಿ ರೈತರಿಂದ ಪಡೆಯಲಾದ ಭೂಮಿಗೆ 10 ಲಕ್ಷ ಪ್ರತಿ ಹೆಕ್ಟೇರ್‌ಗೆ ನಿಗದಿ ಮಾಡಲಾಗಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ವಿಶೇಷ ಪ್ರಯತ್ನ ನಡೆಸಿದ ಕಾರಣ ಇದೀಗ 50 ಲಕ್ಷ ರೂಪಾಯಿ ನೀಡಲು ಸರ್ಕಾರ ತಿರ್ಮಾನಿಸಿದೆ. ಇಂದು ಸಾಂಕೇತಿಕವಾಗಿ 50 ಲಕ್ಷ ರೂ. ಚೆಕ್ ವಿತರಣೆ ಮಾಡಲಾಗಿದೆ. ಇನ್ನು ಈ ವಾರದಲ್ಲಿ ಆರ್‌ಟಿಜಿಎಸ್ ಮೂಲಕ ರೈತರಿಗೆ ಪರಿಹಾರ ನೀಡಲಾಗುವುದು ಎಂದರು.

7 ಲಕ್ಷ ಉದ್ಯೋಗ ಸೃಷ್ಟಿ
ಈ ಭಾಗದಲ್ಲಿ ಮಿನಿ ಟೆಕ್ಸ್‌ಟೈಲ್ ಪಾರ್ಕ್, ಹಡಗುಗಳ ಬಿಡಿಭಾಗ ತಯಾರಿಕೆ, ಗ್ರೀನ್ ಹೈಡ್ರೋಜನ್ ತಯಾರಿಸುವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳಿವೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಅನುದಾನ ನೀಡಲಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಬಂದರು, ಏರ್‌ಪೋರ್ಟ್ ಸಂಪರ್ಕ ಸಾಧ್ಯವಾಗುವುದರಿಂದ ವ್ಯವಹಾರಕ್ಕೆ ಹೆಚ್ಚು ಅನುಕೂಲಕರವಾಗಿದೆ ಎಂದರು.
ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟ್‌ಮೆಂಟರ್ ಕಾರ್ಯಕ್ರಮದಲ್ಲಿ ಹಲವು ಕಂಪನಿಗಳೊಂದಿಗೆ ಸಹಿ ಮಾಡಲಾಗಿದೆ. ಇದರಿಂದ ಸುಮಾರು 7 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ಕಾರವಾರದಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನರಿಗೆ ತೊಂದರೆಯಾಗದಂತೆ ಕ್ರಮ
ಉತ್ತರ ಕರ್ನಾಟಕ ಭಾಗಕ್ಕೆ ಜಿಲ್ಲೆಯಿಂದ ನೀರು ಕೊಂಡೊಯ್ಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉತ್ತರಕರ್ನಾಟಕ ಹಾಗೂ ಕಾರವಾರದ ಎಲ್ಲರೂ ಸಹೋದರ ಭಾವನೆಯಲ್ಲಿದ್ದಾರೆ. ಎಲ್ಲಿ ಏನು ಕೊರತೆ ಇದೆ ಅಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಜನರಿಗೆ ಪರಿಸರಕ್ಕೆ ತೊಂದರೆಯಾಗದ ರಿತಿಯಲ್ಲಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ರೂಪಾಲಿ ನಾಯ್ಕ ಮಾದರಿ ಶಾಸಕಿ
ಜನರ ಕೆಲಸ ಮಾಡುವುದರಲ್ಲಿ, ಕ್ಷೇತ್ರದ ಅಭಿವೃದ್ಧಿ ಮಾಡುವುದರಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾದರಿಯಾಗಿದ್ದಾರೆ. ಮುಡಗೇರಿಯಲ್ಲಿ 2005 ರಿಂದ 2023ರವರೆಗೆ ರೈತರು ಪರಿಹಾರಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದರು. ಒಂದು ಬಾರಿ ಕೆಐಡಿಬಿ ವಶಕ್ಕೆ ಪಡೆಸಿಕೊಂಡರೇ ಆಗ ಜಾಗ ಮಾರಾಟ ಮಾಡಲು, ಸಾಲ ಪಡೆಯಲು ಆಗುವುದಿಲ್ಲ.
2008 ರಲ್ಲಿ ಕೈಗಾರಿಕೆ ಸಚಿವ ಆಗಿದ್ದಾಗ 10 ಲಕ್ಷ ಕೊಡಲು ನಾನೇ ಒಪ್ಪಿದ್ದೆ. ರೈತರು ಶಾಸಕಿ ರೂಪಾಲಿ ನಾಯ್ಕ ಬಳಿ ಒತ್ತಾಯ ಮಾಡಿದಾಗ ನನ್ನ ಗಮನಕ್ಕೆ ಬಂದಿದ್ದರು. ಆಗ ಎಲ್ಲಾ ಲೆಕ್ಕಾಚಾರ ಮಾಡಿದಾಗ 40 ಲಕ್ಷ ಪರಿಹಾರ ಕೊಡಲು ಆಗುತ್ತಿರಲಿಲ್ಲ. ರೂಪಾಲಿ ನಾಯ್ಕ ಬಿಡದೇ ಪಟ್ಟು ಹಿಡಿದಿದ್ದರಿಂದ ಹೆಕ್ಟೇರ್‌ಗೆ 50 ಲಕ್ಷ ಪರಿಹಾರ ಕೊಡುತ್ತಿದ್ದೇವೆ ಎಂದರು.
ನನ್ನ ಕ್ಷೇತ್ರದಲ್ಲಿ 18 ಲಕ್ಷ ಪರಿಹಾರ
50 ಲಕ್ಷ ಪರಿಹಾರ ಕೊಡುತ್ತಿರುವ ಕ್ರೆಡಿಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕೆ ಸಚಿವರಾದ ನನಗೆ ಬರುವುದಿಲ್ಲ. ಶಾಸಕಿ ರೂಪಾಲಿ ನಾಯ್ಕ ಅವರಿಗೆ ಕ್ರೆಡಿಟ್ ಬರುತ್ತದೆ. ನನ್ನ ಕ್ಷೇತ್ರದಲ್ಲಿ 2 ಸಾವಿರ ಹೆಕ್ಟೆರ್ ಭೂಮಿ ವಶಕ್ಕೆ ಪಡೆದಿದ್ದರು. ಆದರೆ ಹೆಕ್ಟೇರ್‌ಗೆ 18 ಲಕ್ಷ ರೂ. ಮಾತ್ರ ಪರಿಹಾರ ಕೊಟ್ಟಿದ್ದರು. ಆದರೆ ಶಾಸಕರು ನಮ್ಮನ್ನ ಮನವೊಲಿಸಿ 50 ಲಕ್ಷ ಪರಿಹಾರ ಕೊಡುವಂತೆ ಮಾಡಿದ್ದಾರೆ. ನಾನು ಹಲವು ಖಾತೆ ನಿಭಾಯಿಸಿದ್ದೇನೆ.
ನನ್ನ ಬಳಿ ಹಲವು ಶಾಸಕರು ಕೆಲಸಕ್ಕೆಂದು ಬರುತ್ತಾರೆ. ಆದರೆ ಶಾಸಕಿ ರೂಪಾಲಿ ನಾಯ್ಕ ವಿಭಿನ್ನವಾಗಿದ್ದಾರೆ. ಜನರ ಕೆಲಸ, ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಪಟ್ಟು ಹಿಡಿಯುವುದು ನೋಡಿದರೆ ಮಾದರಿ ಶಾಸಕಿ ಎಂದು ಕರೆದರೆ ತಪ್ಪಾಗುವುದಿಲ್ಲ ಎಂದು ಹೊಗಳಿದರು.











Click it and Unblock the Notifications